ಶುಭಮನ್ ಗಿಲ್
ಪಿಟಿಐ ಚಿತ್ರ
ಲಂಡನ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿರುವ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್, ಭಾರತ ತಂಡದ ಪರ ಸರಣಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಪ್ರಸ್ತುತ ಐದು ಪಂದ್ಯಗಳ ಸರಣಿಯ 9 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಗಿಲ್, 4 ಶತಕ ಸಹಿತ 737 ರನ್ ಗಳಿಸಿದ್ದಾರೆ. ಅಂತಿಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 15 ರನ್ ಗಳಿಸಿರುವ ಅವರು, ತಮ್ಮ ಖಾತೆಗೆ ಇನ್ನಷ್ಟು ರನ್ ಸೇರಿಕೊಳ್ಳುವ ಲೆಕ್ಕಾಚಾರದಲ್ಲಿದೆ.
ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅವರು 1978/79ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 732 ರನ್ ಗಳಿಸಿದ್ದು ಈವರೆಗೆ ದಾಖಲೆಯಾಗಿತ್ತು. ವಿರಾಟ್ ಕೊಹ್ಲಿ ಅವರು 2016–17ರಲ್ಲಿ ಇಂಗ್ಲೆಂಡ್ ವಿರುದ್ಧ 655 ರನ್, 2017–18ರಲ್ಲಿ ಶ್ರೀಲಂಕಾ ವಿರುದ್ಧ 610 ರನ್ ಹಾಗೂ 2018ರಲ್ಲಿ ಇಂಗ್ಲೆಂಡ್ ವಿರುದ್ಧ 593 ರನ್ ಗಳಿಸಿದ್ದರು.
ಪಂದ್ಯಕ್ಕೆ ಮಳೆ ಅಡ್ಡಿ
ಲಂಡನ್‌ನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾಗಿರುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಮೊದಲ ಅವಧಿಯ ಅಂತಿಮ ಹಂತದಲ್ಲಿ ಮಳೆ ಸುರಿದ ಕಾರಣ, ಬೇಗನೆ ಊಟದ ವಿರಾಮ ತೆಗೆದುಕೊಳ್ಳಲಾಯಿತು. ಇದೀಗ, ಮೈದಾನದಲ್ಲಿನ ತೇವದಿಂದಾಗಿ ಆಟ ಪುನರಾರಂಭ ವಿಳಂಬವಾಗಿದೆ.
ಸದ್ಯ ಭಾರತ ತಂಡದ ಮೊತ್ತ 2 ವಿಕೆಟ್‌ಗೆ 72 ರನ್ ಆಗಿದೆ. ಆರಂಭಿಕರಾದ ಯಶಸ್ವಿ ಜೈಸ್ವಾಲ್ (2 ರನ್) ಮತ್ತು ಕೆ.ಎಲ್.ರಾಹುಲ್ (14 ರನ್) ಬೇಗನೆ ವಿಕೆಟ್ ಒಪ್ಪಿಸಿದ್ದಾರೆ. ನಾಯಕ ಗಿಲ್ ಹಾಗೂ ಸಾಯಿ ಸುದರ್ಶನ್ (25 ರನ್) ಕ್ರೀಸ್‌ನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.