ಶತಕ ಗಳಿಸಿ ಸಂಭ್ರಮಿಸಿದ ಜೋ ರೂಟ್
ರಾಯಿಟರ್ಸ್ ಚಿತ್ರ
ಮ್ಯಾಂಚೆಸ್ಟರ್: ಭಾರತ ತಂಡದ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಟೆಸ್ಟ್ ಪರಿಣತ ಬ್ಯಾಟರ್ ಜೋ ರೂಟ್ ಸಿಡಿಸಿದ ಶತಕ ಹಾಗೂ ಅಗ್ರ ಕ್ರಮಾಂಕದ ಜಾಕ್ ಕ್ರಾಲಿ, ಬೆನ್ ಡಕೆಟ್ ಹಾಗೂ ಓಲಿ ಪೋಪ್ ಅವರ ಅರ್ಧಶತಕಗಳ ಬಲದಿಂದ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 409 ರನ್ ಗಳಿಸಿ ಆಡುತ್ತಿದೆ.
ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 358 ರನ್ ಗಳಿಸಿ ಆಲೌಟ್ ಆಗಿತ್ತು.
ಎರಡನೇ ದಿನವೇ ಬ್ಯಾಟಿಂಗ್ ಆರಂಭಿಸಿದ ಆತಿಥೇಯ ಬ್ಯಾಟರ್‌ಗಳು, ಭಾರತದ ಬೌಲರ್‌ಗಳೆದುರು ಸವಾರಿ ಮಾಡಿದರು. ಆರಂಭಿಕರಾದ ಕ್ರಾಲಿ ಹಾಗೂ ಡಕೆಟ್ ಜೋಡಿ ಮೊದಲ ವಿಕೆಟ್‌ಗೇ 166 ರನ್ ಸೇರಿಸುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟಿತು. ಅದರ ಮೇಲೆ ರೂಟ್ ಹಾಗೂ ಪೋಪ್ ರನ್ ಶಿಖರ ಕಟ್ಟಿದರು.
ಕ್ರಾಲಿ (84 ರನ್) ಹಾಗೂ ಡಕೆಟ್ (94 ರನ್) ಶತಕದ ಹೊಸ್ತಿಲಲ್ಲಿ ಎಡವಿದರೆ, ಪೋಪ್ 71 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಟೆಸ್ಟ್ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಹ್ಯಾರಿ ಬ್ರೂಕ್ ಆಟ ಕೇವಲ 3 ರನ್‌ಗೆ ಕೊನೆಯಾಯಿತು.
ಶತಕಧಾರಿ ರೂಟ್‌ಗೆ ನಾಯಕ ಬೆನ್ ಸ್ಟೋಕ್ಸ್ (28 ರನ್) ಜೊತೆಯಾಗಿದ್ದಾರೆ. ಸದ್ಯ 50 ರನ್ ಮುನ್ನಡೆ ಸಾಧಿಸಿರುವ ಆಂಗ್ಲರ ತಂಡ, ಅದನ್ನು ಇನ್ನಷ್ಟು ಹೆಚ್ಚಿಕೊಳ್ಳುವ ಲೆಕ್ಕಾಚಾರದಲ್ಲಿದೆ.
ಭಾರತ ಪರ ವಾಷಿಂಗ್ಟನ್ ಸುಂದರ್ 2 ವಿಕೆಟ್ ಉರುಳಿಸಿದ್ದಾರೆ. ಅನ್ಶುಲ್ ಕಾಂಬೋಜ್ ಮತ್ತು ರವೀಂದ್ರ ಜಡೇಜ ಒಂದೊಂದು ವಿಕೆಟ್ ಪಡೆದಿದ್ದಾರೆ.
ಭಾರತದ ವಿರುದ್ಧ 12ನೇ ಶತಕ
ರೂಟ್, ಭಾರತದ ವಿರುದ್ಧ ಗಳಿಸಿದ 12ನೇ ಶತಕ ಇದು. ಇದರೊಂದಿಗೆ ಅವರು, ಒಂದೇ ತಂಡದ ವಿರುದ್ಧ ಹೆಚ್ಚು ಸಲ ಮೂರಂಕಿ ಮೊತ್ತ ಕಲೆಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನಕ್ಕೇರಿದರು. ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಮೊದಲ ಸ್ಥಾನದಲ್ಲಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧ 19 ಶತಕ ಬಾರಿಸಿದ್ದಾರೆ. ಭಾರತದ ಸುನಿಲ್ ಗವಾಸ್ಕರ್ (13 vs ವೆಸ್ಟ್ ಇಂಡೀಸ್) ನಂತರದ ಸ್ಥಾನದಲ್ಲಿದ್ದಾರೆ.
ಉಳಿದಂತೆ ಇಂಗ್ಲೆಂಡ್‌ನ ಜಾಕ್ ಹಾಬ್ಸ್ (vs ಆಸ್ಟ್ರೇಲಿಯಾ), ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ (vs ಇಂಗ್ಲೆಂಡ್) ಕೂಡ ತಲಾ 12 ಸಲ ಈ ಸಾಧನೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.