ADVERTISEMENT

ಟೀಮ್ ಇಂಡಿಯಾ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರಿಲ್ಲ: ಪಿಸಿಬಿ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜನವರಿ 2025, 12:36 IST
Last Updated 21 ಜನವರಿ 2025, 12:36 IST
<div class="paragraphs"><p>ರೋಹಿತ್ ಶರ್ಮಾ</p></div>

ರೋಹಿತ್ ಶರ್ಮಾ

   

(ಸಂಗ್ರಹ ಚಿತ್ರ, ಕೃಪೆ: X@mufaddal_vohra)

ಬೆಂಗಳೂರು: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಗೆ ಸಂಬಂಧಿಸಿದಂತೆ ಹೊಸ ವಿವಾದವೊಂದು ಹುಟ್ಟಿಕೊಂಡಿದೆ.

ADVERTISEMENT

ಟೀಮ್ ಇಂಡಿಯಾದ ಸಮವಸ್ತ್ರದಲ್ಲಿ ಆತಿಥೇಯ ಪಾಕಿಸ್ತಾನದ ಹೆಸರು ಮುದ್ರಿಸದೇ ಇರುವುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಇಂಡೋ-ಏಷ್ಯನ್ ನ್ಯೂಸ್ ಸರ್ವಿಸ್ (ಐಎಎನ್‌ಎಸ್) ವರದಿ ಮಾಡಿದೆ.

'ಕ್ರಿಕೆಟ್‌ನಲ್ಲಿ ಬಿಸಿಸಿಐ ರಾಜಕೀಯ ಮಾಡುತ್ತಿದೆ. ಇದು ಕ್ರಿಕೆಟ್‌ಗೆ ಒಳ್ಳೆಯದಲ್ಲ. ಮೊದಲು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದರು. ಬಳಿಕ ಉದ್ಘಾಟನಾ ಸಮಾರಂಭಕ್ಕೆ ಪಾಕ್‌ಗೆ ಟೀಮ್ ಇಂಡಿಯಾದ ನಾಯಕನನ್ನು ಕಳುಹಿಸಲು ನಿರಾಕರಿಸಿದೆ. ಈಗ ಜೆರ್ಸಿಯಲ್ಲಿ ಆತಿಥೇಯ ರಾಷ್ಟ್ರದ (ಪಾಕಿಸ್ತಾನ) ಹೆಸರನ್ನು ಮುದ್ರಿಸಲು ಬಯಸುವುದಿಲ್ಲ ಎಂಬ ವರದಿಗಳು ಬಂದಿವೆ. ಈ ಸಂಬಂಧ ಐಸಿಸಿ ಮಧ್ಯ ಪ್ರವೇಶಿಸಿ ಪಾಕಿಸ್ತಾನವನ್ನು ಬೆಂಬಲಿಸಲಿದೆ ಎಂಬ ನಂಬಿಕೆಯಿದೆ' ಎಂದು ಪಿಸಿಬಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಐಎಎನ್‌ಎಸ್ ವರದಿ ಮಾಡಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೆಬ್ರುವರಿ 19ರಂದು ಆರಂಭವಾಗಲಿದ್ದು, ಮಾರ್ಚ್ 9ರಂದು ಫೈನಲ್ ನಿಗದಿಯಾಗಿದೆ. ಭಾರತ ಹಾಗೂ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನದ ನಡುವಣ ಪಂದ್ಯ ಫೆ.23ರಂದು (ಭಾನುವಾರ) ದುಬೈನಲ್ಲಿ ನಡೆಯಲಿದೆ.

ಪಾಕಿಸ್ತಾನ ಆತಿಥೇಯ ರಾಷ್ಟ್ರವಾಗಿದ್ದು, ಅದರ ಆತಿಥ್ಯದಲ್ಲಿ ಪಾಕ್ ಹಾಗೂ ಯುಎಇನಲ್ಲಿ ಟೂರ್ನಿ ಆಯೋಜನೆಯಾಗಲಿದೆ. ಭಾರತ ತನ್ನ ಪಂದ್ಯಗಳನ್ನು ಯುಎಇನಲ್ಲಿ ಆಡಲಿದೆ.

ಪಾಕಿಸ್ತಾನಕ್ಕೆ ತಂಡವನ್ನು ಕಳುಹಿಸಲು ಭಾರತ ನಿರಾಕರಿಸಿರುವ ಹಿನ್ನೆಲೆಯಲ್ಲಿ ಐಸಿಸಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಪಿಸಿಬಿ ಸಮ್ಮತಿ ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.