ADVERTISEMENT

ಸೊನ್ನೆ ಸುತ್ತಿದ 6 ಬ್ಯಾಟರ್‌ಗಳು: ಭಾರತದ ಎದುರು ಅನಗತ್ಯ ದಾಖಲೆ ಬರೆದ ಇಂಗ್ಲೆಂಡ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜುಲೈ 2025, 5:01 IST
Last Updated 5 ಜುಲೈ 2025, 5:01 IST
<div class="paragraphs"><p>ಜಾಕ್‌ ಕ್ರಾಲಿ ಬ್ಯಾಟಿಂಗ್‌ ಹಾಗೂ ಮೊಹಮದ್ ಸಿರಾಜ್ ಬೌಲಿಂಗ್‌ ವೈಖರಿ&nbsp;</p></div>

ಜಾಕ್‌ ಕ್ರಾಲಿ ಬ್ಯಾಟಿಂಗ್‌ ಹಾಗೂ ಮೊಹಮದ್ ಸಿರಾಜ್ ಬೌಲಿಂಗ್‌ ವೈಖರಿ 

   

ರಾಯಿಟರ್ಸ್ ಚಿತ್ರಗಳು

ಎಜ್‌ಬಾಸ್ಟನ್‌: ಆತಿಥೇಯ ಇಂಗ್ಲೆಂಡ್‌ ಹಾಗೂ ಭಾರತ ನಡುವಣ ಐದು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಹಣಾಹಣಿಯು ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟ್‌ನಲ್ಲಿ ನಡೆಯುತ್ತಿದೆ.

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡ 180 ರನ್‌ಗಳ ಮುನ್ನಡೆ ಸಾಧಿಸಿದೆ.

ಶುಭಮನ್‌ ಗಿಲ್ ನಾಯಕತ್ವದ ಟೀಂ ಇಂಡಿಯಾ ಕಲೆಹಾಕಿದ್ದ 587 ರನ್‌ಗಳ ಬೃಹತ್‌ ಮೊತ್ತದೆದುರು ಆರಂಭಿಕ ವೈಫಲ್ಯ ಅನುಭವಿಸಿದ ಆತಿಥೇಯ ಪಡೆ, 407 ರನ್‌ ಗಳಿಸಿ ಸರ್ವಪತನ ಕಂಡಿದೆ. ಇದೀಗ ಎರಡನೇ ಇನಿಂಗ್ಸ್‌ ಆರಂಭಿಸಿರುವ ಭಾರತ, 3ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ ಕಳೆದುಕೊಂಡು 64 ರನ್‌ ಗಳಿಸಿದೆ. ಅದರೊಂದಿಗೆ, 244 ರನ್‌ಗಳ ಮುನ್ನಡೆ ಸಾಧಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದೆ.

ಅನಗತ್ಯ ದಾಖಲೆ ಬರೆದ ಆಂಗ್ಲರು
ಇಂಗ್ಲೆಂಡ್‌ ತಂಡದ ಮೊದಲ ಇನಿಂಗ್ಸ್‌ ವೇಳೆ ಆರು ಬ್ಯಾಟರ್‌ಗಳು ಸೊನ್ನೆ ಸುತ್ತಿದರು.

1954 ಹಾಗೂ 1976ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ, 1956ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮತ್ತು 2018ರಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದ ಒಂದೇ ಇನಿಂಗ್ಸ್‌ನಲ್ಲಿ ಐವರು ಶೂನ್ಯಕ್ಕೆ ಔಟಾಗಿದ್ದದ್ದು ಈವರೆಗೆ ಆಂಗ್ಲರ ಬಳಗದ ಕಳಪೆ ದಾಖಲೆಯಾಗಿತ್ತು.

ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ (ಮೂರು ಸಲ), ನ್ಯೂಜಿಲೆಂಡ್‌ ಹಾಗೂ ಭಾರತ (ಎರಡು ಬಾರಿ) ತಂಡಗಳ ಆರು ಬ್ಯಾಟರ್‌ಗಳು ಈ ಹಿಂದೆ ಇನಿಂಗ್ಸ್‌ವೊಂದರಲ್ಲಿ ಖಾತೆ ತೆರೆಯದೆ ಔಟಾದ ದಾಖಲೆಗಳಿವೆ.

2ನೇ ತಂಡದೆದುರು ಭಾರತ ಸಾಧನೆ
ಭಾರತದ ಬೌಲರ್‌ಗಳು, ಇನಿಂಗ್ಸ್‌ವೊಂದರಲ್ಲಿ ಎದುರಾಳಿ ಪಡೆಯ ಆರು ಬ್ಯಾಟರ್‌ಗಳನ್ನು ಖಾತೆ ತೆರೆಯದಂತೆ ಔಟ್‌ ಮಾಡಿದ್ದು ಇದು ಎರಡನೇ ಬಾರಿ. ಈ ಹಿಂದೆ ದಕ್ಷಿಣ ಆಫ್ರಿಕಾ ಎದುರು 1996ರಲ್ಲಿ ಈ ಸಾಧನೆ ಮಾಡಿದ್ದರು.

ನ್ಯೂಜಿಲೆಂಡ್‌ ಹಾಗೂ ಶ್ರೀಲಂಕಾದ ತಲಾ ಐವರು ಬ್ಯಾಟರ್‌ಗಳು ಕ್ರಮವಾಗಿ 1988 ಮತ್ತು 1990ರಲ್ಲಿ ಭಾರತದ ಎದುರು ಸೊನ್ನೆ ಸುತ್ತಿದ್ದರು.

ಆಕಾಶ್‌–ಸಿರಾಜ್‌ ಮೋಡಿ
ಭಾರತದ ಬೃಹತ್‌ ಮೊತ್ತದೆದುರು ಆಂಗ್ಲರಿಗೆ ಉತ್ತಮ ಆರಂಭ ಸಿಗಲಿಲ್ಲ. ಅಗ್ರಮಾನ್ಯ ವೇಗಿ ಜಸ್‌ಪ್ರೀತ್‌ ಬೂಮ್ರಾ ಅವರ ಅನುಪಸ್ಥಿತಿಯಲ್ಲಿ ಆಡುವ ಅವಕಾಶ ಪಡೆದ ಆಕಾಶ್‌ ದೀಪ್‌ ಹಾಗೂ ಅನುಭವಿ ಮೊಹಮದ್‌ ಸಿರಾಜ್‌ ಅಗ್ರ ಕ್ರಮಾಂಕಕ್ಕೆ ಪೆಟ್ಟು ನೀಡಿದರು.

ಆಕಾಶ್‌ 88 ರನ್‌ ನೀಡಿ 4 ವಿಕೆಟ್‌ ಪಡೆದರೆ, ಸಿರಾಜ್‌ 70 ರನ್‌ಗೆ ಆರು ವಿಕೆಟ್‌ ಉರುಳಿಸಿದರು.

ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಬೆನ್‌ ಡಕೆಟ್‌ ಹಾಗೂ ಓಲಿ ಪೋಪ್‌ ಅವರನ್ನು ಔಟ್‌ ಮಾಡಿದ ಆಕಾಶ್‌, ಭಾರತಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು. ನಂತರ, ಅವರೊಂದಿಗೆ ಕೈ ಜೋಡಿಸಿದ ಸಿರಾಜ್‌, ಆರಂಭಿಕ ಜಾಕ್‌ ಕ್ರಾಲಿ, ಟೆಸ್ಟ್ ಪರಿಣತ ಜೋ ರೂಟ್ ಮತ್ತು ನಾಯಕ ಬೆನ್‌ ಸ್ಟೋಕ್ಸ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.

ಆದರೆ ಈ ಹಂತದಲ್ಲಿ ಹ್ಯಾರಿ ಬ್ರೂಕ್ ಮತ್ತು ಜೆಮೀ ಸ್ಮಿತ್‌, ಇಂಗ್ಲೆಂಡ್‌ಗೆ ಆಸರೆಯಾದರು.

ತಂಡದ ಮೊತ್ತ 5 ವಿಕೆಟ್‌ಗೆ 84 ರನ್‌ ಆಗಿದ್ದಾಗ ಜೊತೆಯಾದ ಇವರಿಬ್ಬರು, 6ನೇ ವಿಕೆಟ್‌ ಪಾಲುದಾರಿಕೆಯಲ್ಲಿ ತ್ರಿಶತಕದ (303 ರನ್‌) ಜೊತೆಯಾಟವಾಡುವ ಮೂಲಕ ಪ್ರತಿರೋಧ ತೋರಿದರು. 83ನೇ ಓವರ್‌ನಲ್ಲಿ ಮತ್ತೊಮ್ಮೆ ಚಮತ್ಕಾರ ಮಾಡಿದ ಆಕಾಶ್‌, ಬ್ರೂಕ್‌ ವಿಕೆಟ್‌ ಪಡೆದು ಜೊತೆಯಾಟ ಮುರಿದರು. ಅದರೊಂದಿಗೆ, ಆತಿಥೇಯ ತಂಡದ ಪೆವಿಲಿಯನ್‌ ಪರೇಡ್‌ ಆರಂಭವಾಯಿತು. ಉಳಿದ ವಿಕೆಟ್‌ಗಳನ್ನು ಸಿರಾಜ್‌ ಉರುಳಿಸಿದರು.

158 ರನ್‌ ಗಳಿಸಿದ್ದ ಬ್ರೂಕ್‌ ಔಟಾದ ನಂತರ ಬಂದ ಉಳಿದವರು ಭಾರತದ ವೇಗಿಗಳಿಗೆ ಸಾಟಿಯಾಗಲಿಲ್ಲ. ಕ್ರಿಸ್‌ ವೋಕ್ಸ್‌ 5 ರನ್‌ ಗಳಿಸಿದರೆ, ಬ್ರೇಡನ್‌ ಕೇರ್ಸ್‌, ಜೋಸ್‌ ಟಂಗ್‌ ಮತ್ತು ಶೋಯಬ್‌ ಬಷೀರ್‌ ಖಾತೆ ತೆರೆಯಲು ವಿಫಲರಾದರು. 184 ರನ್‌ ಗಳಿಸಿ ಅಜೇಯವಾಗಿ ಉಳಿದ ಸ್ಮಿತ್‌, ದ್ವಿಶತಕ ಗಳಿಸುವ ಅವಕಾಶ ವಂಚಿತರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.