
ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್
ಕೃಪೆ: ಪಿಟಿಐ
ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರು, ಈ ಬಾರಿಯ ಮಿನಿ ಹರಾಜಿನಲ್ಲಿ ಬರೋಬ್ಬರಿ ₹ 25.20 ಕೋಟಿಯನ್ನು ಜೇಬಿಗಿಳಿಸಿದ್ದಾರೆ. ₹ 2 ಕೋಟಿ ಮುಖಬೆಲೆ ಹೊಂದಿದ್ದ ಅವರನ್ನು ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡ ದುಬಾರಿ ಬೆಲೆಗೆ ಖರೀದಿಸಿದೆ.
2023ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಗ್ರೀನ್, ಮೊದಲ ಆವೃತ್ತಿಯಲ್ಲೇ ಯಶಸ್ಸು ಸಾಧಿಸಿದ್ದರು. 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದ ಅವರು, ಟೂರ್ನಿ ಮಧ್ಯೆಯೇ ನಿರ್ಗಮಿಸಿದ್ದರು. ಆದಾಗ್ಯೂ, ಆಡಿದ 13 ಪಂದ್ಯಗಳಲ್ಲಿ 255 ರನ್ ಹಾಗೂ 10 ವಿಕೆಟ್ ಪಡೆದಿದ್ದರು. 2025ರಲ್ಲಿ ಆಡಿರಲಿಲ್ಲ.
ಐಪಿಎಲ್ 19ನೇ ಆವೃತ್ತಿಯು 2026ರ ಮಾರ್ಚ್ 26ರಿಂದ ಮೇ 31ರವರೆಗೆ ನಡೆಯಲಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಉದ್ಘಾಟನಾ ಪಂದ್ಯದಲ್ಲಿ ಆಡಲಿದೆ. ಸಂಪೂರ್ಣ ವೇಳಾಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಿದೆ.
ದುಬಾರಿ ಆಟಗಾರ ಪಂತ್
ಐಪಿಎಲ್ ಹರಾಜು ಇತಿಹಾಸದಲ್ಲಿ ಅತ್ಯಧಿಕ ಮೊತ್ತ ಗಳಿಸಿದ ಆಟಗಾರ ಎಂಬ ಶ್ರೇಯ ದೆಹಲಿಯ ವಿಕೆಟ್‌ಕೀಪರ್ – ಬ್ಯಾಟರ್ ರಿಷಭ್ ಪಂತ್ ಅವರದ್ದು. 2025ರ ಆವೃತ್ತಿಗೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಅವರು ₹ 27 ಕೋಟಿ ಜೇಬಿಗಿಳಿಸಿಕೊಂಡು ಲಖನೌ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಬಳಗ ಸೇರಿದ್ದರು. ಅದೇ ವರ್ಷ, ಪಂಜಾಬ್ ಕಿಂಗ್ಸ್ ಪಡೆ ಶ್ರೇಯಸ್ ಅಯ್ಯರ್ ಅವರಿಗೆ ₹ 26.75 ಕೋಟಿ ನೀಡಿತ್ತು.
ಹರಾಜಿನ ನಂತರ ದುಬಾರಿ ಆಟಗಾರರ ಸಾಧನೆ
1. ರಿಷಭ್ ಪಂತ್ – ₹ 27 ಕೋಟಿ
ಕಳೆದ ಆವೃತ್ತಿಗೂ ಮುನ್ನ ನಡೆದ ಹರಾಜಿನಲ್ಲಿ ಬರೋಬ್ಬರಿ ₹ 27 ಕೋಟಿ ಪಡೆದಿದ್ದ ರಿಷಭ್, ಮೈದಾನದಲ್ಲಿ ಅಷ್ಟೇನೂ ಪರಿಣಾಮಕಾರಿ ಆಟವಾಡಿರಲಿಲ್ಲ.
ಎಲ್‌ಎಸ್‌ಜಿ ನಾಯಕರಾಗಿ ಆಡಿದ್ದ ಅವರು, 14 ಪಂದ್ಯಗಳ 13 ಇನಿಂಗ್ಸ್‌ಗಳಲ್ಲಿ ಗಳಿಸಿದ್ದು 269 ರನ್ ಮಾತ್ರ. ಟೂರ್ನಿಯಲ್ಲಿ ಗುಂಪು ಹಂತದಲ್ಲೇ ನಿರ್ಗಮಿಸಿದ್ದ ಎಲ್‌ಎಸ್‌ಜಿ, ಆಡಿದ 14 ಪಂದ್ಯಗಳ ಪೈಕಿ 6ರಲ್ಲಿ ಗೆದ್ದು, 8ರಲ್ಲಿ ಪರಾಭವಗೊಂಡಿತ್ತು.
2. ಶ್ರೇಯಸ್ ಅಯ್ಯರ್ – ₹ 26.75 ಕೋಟಿ
2025 ಆವೃತ್ತಿಗೆ ನಡೆದ ಹರಾಜಿನಲ್ಲಿ ₹ 26.75 ಕೋಟಿ ಗಿಟ್ಟಿಸಿದ್ದ ಶ್ರೇಯಸ್ ಅಯ್ಯರ್, ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವವನ್ನೂ ವಹಿಸಿಕೊಂಡಿದ್ದರು.
ಟೂರ್ನಿಯುದ್ದಕ್ಕೂ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಅವರು, 17 ಪಂದ್ಯಗಳ 17 ಇನಿಂಗ್ಸ್‌ಗಳಲ್ಲಿ 6 ಅರ್ಧಶತಕ ಸಹಿತ 604 ರನ್ ಗಳಿಸಿದ್ದರು. ಜೊತೆಗೆ, ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದರು.
3. ಕ್ಯಾಮರೂನ್ ಗ್ರೀನ್ – ₹ 25.20 ಕೋಟಿ
ಗ್ರೀನ್ ಅವರು ಈ ಬಾರಿಯ ಮಿನಿ ಹರಾಜಿನಲ್ಲಿ ₹ 25.20 ಕೋಟಿ ಪಡೆದು ಕೋಲ್ಕತ್ತ ನೈಟ್‌ರೈಡರ್ಸ್ ಕೂಡಿಕೊಂಡಿದ್ದಾರೆ.
ಈ ಹಿಂದೆ (2023ರಲ್ಲಿ) ₹ 17.5 ಕೋಟಿ ಪಡೆದಿದ್ದ ಗ್ರೀನ್, ಮುಂಬೈ ಪರ ಉತ್ತಮ ಪ್ರದರ್ಶನ ನೀಡಿದ್ದರು.
4. ಮಿಚೇಲ್ ಸ್ಟಾರ್ಕ್ – ₹ 24.75 ಜೋಟಿ
ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೇಲ್ ಸ್ಟಾರ್ಕ್ ಅವರು 2024ರ ಆವೃತ್ತಿಗೆ ನಡೆದ ಹರಾಜಿನಲ್ಲಿ ₹ 24.75 ಕೋಟಿಗೆ ಬಿಕರಿಯಾಗಿದ್ದರು. ಅವರನ್ನು ಕೋಲ್ಕತ್ತ ನೈಟ್ ರೈಡರ್ಸ್ ಖರೀದಿಸಿತ್ತು.
ಆಡಿದ 13 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದರು. ಟೂರ್ನಿಯುದ್ದಕ್ಕೂ ನೀರಸ ಆಟವಾಡಿದ್ದ ಅವರು, ಫೈನಲ್‌ನಲ್ಲಿ ಮಿಂಚಿದ್ದರು. ಮೂರು ಓವರ್‌ಗಳಲ್ಲಿ 13 ರನ್ ನೀಡಿ ಪ್ರಮುಖ 2 ವಿಕೆಟ್ ಪಡೆಯುವ ಮೂಲಕ ತಮ್ಮ ತಂಡ ಚಾಂಪಿಯನ್ ಪಟ್ಟಕ್ಕೇರಲು ನೆರವಾಗಿದ್ದರು.
5. ವೆಂಕಟೇಶ್ ಅಯ್ಯರ್ – ₹ 23.75 ಕೋಟಿ
ಎಡಗೈ ಬ್ಯಾಟರ್ ಹಾಗೂ ಬಲಗೈ ಮಧ್ಯಮ ವೇಗಿಯಾಗಿರುವ ವೆಂಕಟೇಶ್ ಅಯ್ಯರ್ ಅವರನ್ನು ಕೋಲ್ಕತ್ತ ನೈಟ್ ರೈಡರ್ಸ್ ತಂಡ 2025ರ ಆವೃತ್ತಿಗೂ ಮೊದಲು ₹ 23.75 ಕೋಟಿ ನೀಡಿ ಖರೀದಿಸಿತ್ತು. ಆದರೆ, ಆ ಆವೃತ್ತಿಯಲ್ಲಿ ಅಯ್ಯರ್ ಬ್ಯಾಟ್ ಸದ್ದು ಮಾಡಿರಲಿಲ್ಲ.
11 ಪಂದ್ಯಗಳಲ್ಲಿ ಆಡಿ, 7 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದ ಅಯ್ಯರ್ ಗಳಿಸಿದ್ದು 142 ರನ್ ಅಷ್ಟೇ.
6. ಪ್ಯಾಟ್ ಕಮಿನ್ಸ್ – ₹ 20.50 ಕೋಟಿ
ಸನ್‌ರೈಸರ್ಸ್ ಹೈದರಾಬಾದ್ ತಂಡ 2024ರ ಆವೃತ್ತಿಗೂ ಮೊದಲು ಪ್ಯಾಟ್ ಕಮಿನ್ಸ್ ಅವರನ್ನು ₹ 20.50 ಕೋಟಿ ಖರೀದಿಸಿತ್ತು.
ತಂಡವನ್ನೂ ಮುನ್ನಡೆಸಿದ್ದ ಕಮಿನ್ಸ್, 16 ಪಂದ್ಯಗಳಲ್ಲಿ 18 ವಿಕೆಟ್ ಹಾಗೂ 10 ಇನಿಂಗ್ಸ್‌ಗಳಿಂದ 136 ರನ್ ಕಲೆಹಾಕಿದ್ದರು.
7. ಸ್ಯಾಮ್ ಕರನ್ – ₹18.50 ಕೋಟಿ
ಪಂಜಾಬ್ ಕಿಂಗ್ಸ್ ತಂಡ ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಅವರನ್ನು 2023ರ ಆವೃತ್ತಿಗೂ ಮೊದಲು ₹18.50 ಕೋಟಿ ನೀಡಿ ಖರೀದಿಸಿತ್ತು. ಕರನ್, ಆ ಋತುವಿನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡಿದ್ದರು.
13 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿ 276 ರನ್ ಗಳಿಸಿದ್ದ ಅವರ, ಬೌಲಿಂಗ್‌ನಲ್ಲಿ 10 ವಿಕೆಟ್ ಪಡೆದಿದ್ದರು.
8. ಅರ್ಷದೀಪ್ ಸಿಂಗ್ – ₹18 ಕೋಟಿ
ಪಂಜಾಬ್ ಕಿಂಗ್ಸ್, 2025ರ ಆವೃತ್ತಿಗಾಗಿ ಅರ್ಷದೀಪ್ ಅವರನ್ನು ₹ 18 ಕೋಟಿ ನೀಡಿ ಖರೀದಿಸಿತ್ತು. ಎಡಗೈ ವೇಗಿಯಾಗಿರುವ ಸಿಂಗ್, 17 ಪಂದ್ಯಗಳಲ್ಲಿ 21 ವಿಕೆಟ್ ಪಡೆದಿದ್ದರು. ಅವರ ಆಟದ ನೆರವಿನಿಂದ ಕಿಂಗ್ಸ್, ಫೈನಲ್ ತಲುಪಿತ್ತು.
9. ಯುಜವೇಂದ್ರ ಚಾಹಲ್ – ₹18 ಕೋಟಿ
2025ರ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಯುಜವೇಂದ್ರ ಚಾಹಲ್ ಅವರು, ₹ 18 ಕೋಟಿ ಜೇಬಿಗಿಳಿಸಿದ್ದರು. 14 ಪಂದ್ಯಗಳ 13 ಇನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿದ್ದ ಅವರು, 16 ವಿಕೆಟ್‌ಗಳನ್ನು ಪಡೆದಿದ್ದರು.
10. ಕ್ಯಾಮರೂನ್ ಗ್ರೀನ್ – ₹ 17.5 ಕೋಟಿ
2023ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಗ್ರೀನ್, ಆ ಆವೃತ್ತಿಯ ದುಬಾರಿ ಆಟಗಾರ ಎನಿಸಿದ್ದರು. ಲೀಗ್ ಶುರುವಿಗೂ ಮೊದಲು ನಡೆದ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ, ₹ 17.5 ಕೋಟಿ ನೀಡಿ ಖರೀದಿ ಮಾಡಿತ್ತು.
ಮೊದಲ ಆವೃತ್ತಿಯಲ್ಲೇ ಮಿಂಚಿದ್ದ ಅವರು, ಆಲ್‌ರೌಂಡ್ ಆಟದ ಮೂಲಕ ಗಮನ ಸೆಳೆದಿದ್ದರು. 16 ಪಂದ್ಯಗಳಲ್ಲಿ ಒಂದು ಶತಕ ಸಹಿತ 452 ರನ್ ಕಲೆಹಾಕಿದ್ದರು. ಹಾಗೆಯೇ, 6 ವಿಕೆಟ್‌ಗಳನ್ನು ಪಡೆಯುವ ಮೂಲಕ ಬೌಲಿಂಗ್‌ನಲ್ಲೂ ಕಾಣಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.