ADVERTISEMENT

ಸಾಮಾಜಿಕ ಮಾಧ್ಯಮಗಳ ಮೂಲಕ ಜಗದ ಗಮನ ಸೆಳೆದು, ಬದುಕಿನ ಪಾಠ ಕಲಿಸಿದ ಪ್ರಾಣಿಗಳಿವು..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2026, 4:35 IST
Last Updated 26 ಫೆಬ್ರುವರಿ 2026, 4:35 IST
   

ಮಾತು ಬಾರದಿದ್ದರೂ, ಜಗತ್ತಿಗೆ ಜೀವನಪ್ರೇಮದ ಮಹತ್ತರವಾದ ಸಂದೇಶಗಳನ್ನು ಸಾರಿದ ಮೂಕ ಪ್ರಾಣಿಗಳ ಕಥೆಗಳಿವು.

ಒಂದು, ಹೆತ್ತ ತಾಯಿಗೇ ಬೇಡವಾದ ನತದೃಷ್ಟ ಕೋತಿ ಮರಿ. ಇನ್ನೊಂದು, ಬಂಧು-ಬಳಗವನ್ನೆಲ್ಲ ತೊರೆದು ವೈರಾಗ್ಯ ತಾಳಿದವರಂತೆ ಏಕಾಂಗಿಯಾಗಿ ಹೊರಟ ಪೆಂಗ್ವಿನ್‌. ಮತ್ತೊಂದು, ಲೋಕ ಕಲ್ಯಾಣಕ್ಕಾಗಿ ನಡೆದ ಸಂತರ ಹೆಜ್ಜೆಗೆಜ್ಜೆ ಕೂಡಿಸಿ, ಊರು - ಕೇರಿ, ಬಳಗವನ್ನು ಬಿಟ್ಟು ದೇಶವನ್ನೇ ದಾಟಿದ ಬೀದಿ ನಾಯಿ. ಮಗದೊಂದು, ಜೊತೆಯಾಗಿ ಬೆಳೆದ ಸಹಚರನನ್ನೇ ಕೊಂದು, ಅದರ ರುಂಡವನ್ನು ಹೊತ್ತು ಅಲೆಯುತ್ತಿರುವ ಜಿಂಕೆ.

ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಕಾಣಿಸಿಕೊಂಡಿರುವ ಈ ನಾಲ್ಕೂ ಜೀವಗಳು ಎಂದೂ ಮುಖಾಮುಖಿಯಾಗಿಲ್ಲ. ಆದರೆ, ಸಾಮಾಜಿಕ ಮಾಧ್ಯಮಗಳು, ಇವನ್ನೆಲ್ಲ ಒಂದೇ ವೇದಿಕೆಗೆ ತಂದಿವೆ. ಇವು, ಬದುಕಿನ ಸಾರವನ್ನು ಅರ್ಥೈಸಲು ಮಾತುಗಳೇಕೆ, ಮೌನವಾಗಿದ್ದುಕೊಂಡೇ ದಾಟಿಸಬಹುದು ಎಂಬುದನ್ನು ತೋರಿಸಿಕೊಟ್ಟಿವೆ.

ADVERTISEMENT

ಇದ್ದಲ್ಲೇ ಪ್ರೀತಿಯ ಹುಡುಕು...

ಜಪಾನ್‌ನ ಇಚಿಕಾವಾ ಮೃಗಾಲಯದಲ್ಲಿರುವ ಏಳು ತಿಂಗಳ ಕೋತಿ ಮರಿಯೇ ನಮ್ಮ ಮೊದಲ ಕಥೆಯ ನಾಯಕ. ಬಂಧು-ಬಳಗದ 'ಪ್ರೀತಿ'ಯನ್ನೇ ಕಾಣದ ಈತನಿಗೆ ಅಲ್ಲಿನ ಸಿಬ್ಬಂದಿ 'ಪ್ರೀತಿ'ಯಿಂದ ಇಟ್ಟಿರುವ ಹೆಸರು ಪಂಚ್‌.

ಎಲ್ಲರಂತಲ್ಲ ಈ ಪಂಚ್‌. ಹುಟ್ಟಿದ ಸ್ವಲ್ಪ ಹೊತ್ತಿಗೆ ಅಮ್ಮನಿಗೇ ಬೇಡವಾದವ ಇವನು. ಹೆತ್ತವಳಿಗೇ ಬೇಡವಾದವನನ್ನು ಇನ್ಯಾರು ಅಪ್ಪಿ ಮುದ್ದಾಡುವರು? ಗುಂಪಿನ ಉಳಿದ ಮಂಗಗಳೂ ಮಮತೆ ತೋರಲಿಲ್ಲ. ಬಳಗವೆಲ್ಲ ಬಳಿಯೇ ಇದ್ದರೂ, 'ನಾನಿರುವೆ ನಿನಗೆ' ಎನ್ನುವ ಜೀವ ಒಂದೂ ಸಿಗಲಿಲ್ಲ ಇದಕ್ಕೆ. ಹೀಗಿದ್ದ ಸಮಯದಲ್ಲಿ, ಅಲ್ಲಿನ ಸಿಬ್ಬಂದಿ, ಅದರಂತೇಯೇ ಇರುವ ಗೊಂಬೆಯೊಂದನ್ನು ನೀಡಿದ್ದಾರೆ. ಒಂಟಿತನದಿ ಸೊರಗಿ, ಅಗ್ಗಿಷ್ಟಿಕೆಯೊಳಗೆ ಬಿದ್ದವರಂತೆ ʼಕಾಲ ಸರ್ರನೆ ಸರಿಯುತ್ತಿಲ್ಲವೇಕೆ?ʼ ಎಂದು ಶಪಿಸುತ್ತಿದ್ದ ಪಂಚ್‌ ಬದುಕಿನಲ್ಲೊಂದು ಭರವಸೆ ಮೂಡಿದ್ದು ಆಗಲೇ.

ಪಂಚ್‌ಗೆ ಆ ನಿರ್ಜೀವ ಗೊಂಬೆಯಲ್ಲಿ ಅಮ್ಮನ ಮಡಿಲು, ಅಪ್ಪನ ಹೆಗಲು, ಅಣ್ಣನ ಅಭಯ, ತಂಗಿಯ ಕಾಳಜಿ ದಕ್ಕಿತು.

ವಾಸ್ತವದಲ್ಲಿ ಆ ಗೊಂಬೆಯಲ್ಲಿ ಅಂತಹದ್ದೇನೂ ಜಾದುವಿರಲಿಲ್ಲ. ಆದರೆ, ಏನೂ ಇಲ್ಲದ ಹೊತ್ತಲ್ಲಿ ಸಿಕ್ಕ ಸಣ್ಣದೊಂದು ಗೊಂಬೆಯಲ್ಲಿ ಎಲ್ಲವನ್ನೂ ಕಂಡುಕೊಂಡ ಪಂಚ್‌, ಇದ್ದದ್ದರಲ್ಲೇ ಸುಖ ಕಾಣುವ ಪಾಠ ಹೇಳಿದೆ. ಬದುಕನ್ನು ನಾವು ಹೇಗೆ ನೋಡುತ್ತೇವೋ.. ಹಾಗೆಯೇ ಕಾಣುತ್ತದೆ ಎನ್ನುವ ಸ್ಫೂರ್ತಿಯ ಸಂದೇಶ ಸಾರಿದೆ.

ವಿಭಿನ್ನವಾಗಿ ಆಲೋಚಿಸು, ಇಚ್ಛೆಯಂತೆ ಬದುಕು

ಪೆಂಗ್ವಿನ್‌ಗಳು ಸಾಮಾನ್ಯವಾಗಿ ಗುಂಪಾಗಿಯೇ ಜೀವಿಸುತ್ತವೆ. ಆಹಾರ ಹುಡುಕುವುದರಿಂದ ಹಿಡಿದು, ವಲಸೆಯವರೆಗೆ ಅವುಗಳ ಜೀವನ ಕ್ರಮ ಗುಂಪನ್ನು ಅವಲಂಬಿಸಿಯೇ ಸಾಗುತ್ತದೆ. ಆದರೆ, ಇತ್ತೀಚೆಗೆ ಗುಂಪನ್ನು ಬಿಟ್ಟು, ಏಕಾಂಗಿಯಾಗಿ ಹೊರಟ ಪೆಂಗ್ವಿನ್‌ನ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಇಡೀ ಗುಂಪು ಒಂದೆಡೆ ಸಾಗುತ್ತಿದ್ದಾಗ ಏಕಾಏಕಿ ನಿಲ್ಲುವ ಆ ಪೆಂಗ್ವಿನ್‌, ಹಿಮ್ಮುಖವಾಗಿ ತಿರುಗಿ ಹತ್ತಾರು ಮೈಲಿ ದೂರದ ಹಿಮ ಪರ್ವತಗಳ ಕಡೆಗೆ ನಡೆಯಲಾರಂಭಿಸುತ್ತದೆ. ಸ್ವಲ್ಪ ದೂರ ನಡೆದು ಹಿಂತಿರುಗಿ ಗುಂಪನ್ನು ನೋಡಿ, ಎಲ್ಲ ಸಂಕೋಲೆಗಳನ್ನೂ ಕಳಚಿಕೊಂಡವರಂತೆ ಮತ್ತೆ ಓಡಲಾರಂಭಿಸುತ್ತದೆ.

ಅಂದಹಾಗೆ, ಈ ವಿಡಿಯೊ ನಿನ್ನೆ, ಮೊನ್ನೆಯದಲ್ಲ. ಬರೋಬ್ಬರಿ 19 ವರ್ಷ ಹಿಂದಿನದು. ವಾರ್ನರ್ ಹೆರ್ಜಾಗ್ ಅವರ ‘ಎನ್‌ಕೌಂಟರ್ಸ್ ಅಟ್ ದಿ ಎಂಡ್ ಆಫ್ ದಿ ವರ್ಲ್ಡ್’ನ ಸಾಕ್ಷ್ಯಚಿತ್ರದ್ದು. ಅದು 2007ರಲ್ಲಿ ಬಿಡುಗಡೆಯಾಗಿತ್ತು.

ಗುಂಪು ತೊರೆದ ಪೆಂಗ್ವಿನ್‌ ಕುರಿತು, 'ಒಂದೇ ಕಡೆ ಇದ್ದು ಬೇಸತ್ತು ಹೊಸತು ಹುಡುಕಿ ಹೊರಟಿತೋ ಏನೋ?', 'ಗಂಭೀರವಾಗಿ ಗಾಯಗೊಂಡಿದ್ದಿರಬಹುದು', 'ಅನಾರೋಗ್ಯ ಕಾಡಿರಲೂಬಹುದು', 'ಅದರ ಮಾನಸಿಕ ಸ್ಥಿತಿ ಕೆಟ್ಟಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ' - ಹೀಗೆ ಹಲವು ಅಂದಾಜುಗಳು ವಿಜ್ಞಾನಿಗಳು, ವನ್ಯಜೀವಿ ತಜ್ಞರ ಕಡೆಯಿಂದ ಬಂದಿವೆ. ಆದರೆ, ನೆಟ್ಟಿಗರು ಮಾತ್ರ ಒಂಟಿಯಾಗಿ ಹೊರಟ ಪೆಂಗ್ವಿನ್ ಅನ್ನು ಹೀರೊ ರೀತಿ ಬಿಂಬಿಸಿ ವಿಡಿಯೊ ಹಂಚಿಕೊಳ್ಳುತ್ತಿದ್ದಾರೆ. ಅದು ಒಬ್ಬೊಬ್ಬರಿಗೂ ಒಂದೊಂದು ರೀತಿ ಕಂಡಿದೆ.

'ಜೀವನದಲ್ಲಿ ವಿಶಿಷ್ಟ ಪ್ರಯತ್ನಗಳನ್ನು ಮಾಡಬೇಕು', 'ವಿಭಿನ್ನವಾದ ಹಾದಿಯನ್ನು ಅನುಸರಿಸಬೇಕು', 'ಸ್ವತಂತ್ರವಾಗಿ ಬದುಕುವುದನ್ನು ಕಲಿಯಬೇಕು', 'ಯಾರು ಏನೇ ಅನ್ನಲಿ; ನಾವು ನಮ್ಮಿಷ್ಟದಂತೆ ನಡೆಯುವುದನ್ನು ರೂಢಿಸಿಕೊಳ್ಳಬೇಕು' ಎಂಬುದನ್ನು ಪೆಂಗ್ವಿನ್‌ ಸಾರುತ್ತಿದೆ ಎಂಬಂತೆ ಊಹಿಸಿ, ಅರ್ಥೈಸಿಕೊಂಡಿದ್ದಾರೆ.

ದೃಢ ಸಂಕಲ್ಪವಿದ್ದರೆ ತಡೆಯುವವರಾರು ನಿನ್ನ..

ಟೆಕ್ಸಾಸ್‌ನ ಫೋರ್ಟ್‌ ವರ್ತ್‌ ಮೂಲದ 'ಹೌಂಗ್‌ ದಾವೊ ವಿಪಸ್ಸನ ಭವನ ಕೇಂದ್ರ'ವು, ಶಾಂತಿ, ಸಮೃದ್ಧಿ, ಧಾರ್ಮಿಕ ಸಾಮರಸ್ಯ ಹಾಗೂ ಕರುಣೆಯ ಸಂದೇಶವನ್ನು ಜಗತ್ತಿಗೆ ಸಾರುವ ಸಲುವಾಗಿ ಜಾಗೃತಿ ಮೆರವಣಿಗೆ ಆಯೋಜಿಸಿದೆ. ಬೌದ್ಧ ಬಿಕ್ಕುಗಳು 2025ರ ಅಕ್ಟೋಬರ್‌ 10ರಂದು ಆರಂಭಿಸಿರುವ ಈ ಯಾತ್ರೆಯು ಫೋರ್ಟ್‌ ವರ್ತ್‌ನಿಂದ ವಾಷಿಂಗ್ಟನ್‌ ಡಿ.ಸಿ. ಕಡೆಗೆ ಸಾಗಿದೆ. ಸುಮಾರು 3,700 ಕಿ.ಮೀ. ದೂರದ ಈ ಪಯಣ ನಾಲ್ಕು ತಿಂಗಳು ಸಾಗಲಿದೆ. ಅಂದರೆ, ಇದೇ ತಿಂಗಳು (ಫೆಬ್ರುವರಿಯಲ್ಲಿ) ಕೊನೆಗೊಳ್ಳಲಿದೆ.

ಅಮೆರಿಕ ಮೂಲದ ಬಿಕ್ಕುಗಳ ತಂಡ, ಭಾರತದಲ್ಲಿ 2022ರ ಡಿಸೆಂಬರ್‌ನಿಂದ 2023ರ ಮಾರ್ಚ್‌ ಅವಧಿಯಲ್ಲಿ 112 ದಿನ ಶಾಂತಿ ನಡಿಗೆ ಕೈಗೊಂಡಿತ್ತು. ಯಾತ್ರೆ ಆರಂಭವಾದ ಆರನೇ ದಿನವೇ, ಭಾರತದ ಬೀದಿ ನಾಯಿಯೊಂದು ಅವರ ಗುಂಪನ್ನು ಸೇರಿತ್ತು.

ಭಾರತದಾದ್ಯಂತ ವಿಪರೀತ ಬಿಸಿಲನ್ನು ಸಹಿಸಿಕೊಂಡು, ಮಾರ್ಗಮಧ್ಯೆ ಅಪಘಾತವಾದರೂ ಲೆಕ್ಕಿಸದೆ ನೂರಕ್ಕೂ ಹೆಚ್ಚು ದಿನಗಳವರೆಗೆ ಸುಮಾರು 3,000 ಕಿ.ಮೀ. ದೂರ ಬಿಕ್ಕುಗಳೊಂದಿಗೆ ಹೆಜ್ಜೆ ಇಟ್ಟ ಆ ನಾಯಿಯ ಶ್ರದ್ಧೆ, ನಿಷ್ಠೆ, ದೃಢತೆಯನ್ನು ಕಂಡ ಬಿಕ್ಕುಗಳು; ಬೆಳಕು, ದೈವಿಕತೆ ಹಾಗೂ ಆಂತರಿಕ ಸ್ಪಷ್ಟತೆಯನ್ನು ಪ್ರತಿಧ್ವನಿಸುವ 'ಅಲೋಕ' ಎಂಬ ಹೆಸರಿಟ್ಟರು.

ಭಾರತದಲ್ಲಿ ಯಾತ್ರೆ ಮುಗಿದ ನಂತರವೂ ಬಿಕ್ಕುಗಳನ್ನು ಬಿಟ್ಟುಹೋಗದ ಅಲೋಕ, ವಿಮಾನದಲ್ಲಿ ಅಮೆರಿಕಕ್ಕೂ ಹಾರಿದ. ನ್ಯೂಯಾರ್ಕ್‌ನಲ್ಲಿ 28 ದಿನ ಕ್ವಾರಂಟೈನ್‌ನಲ್ಲಿ ಉಳಿದು ನಂತರ ಬಿಕ್ಕುಗಳನ್ನು ಸೇರಿದ. ಇದೀಗ, ಶಾಂತಿ ನಡಿಗೆಯಲ್ಲಿ ಪಾಲ್ಗೊಂಡು ಜಗತ್ತಿನ ಗಮನ ಸೆಳೆಯುತ್ತಿದ್ದಾನೆ.

ಅವನ ಜನಪ್ರಿಯತೆ ಏರುತ್ತಲೇ ಇದೆ. ಮಾರ್ಗದುದ್ದಕ್ಕೂ ಅವನನ್ನು ಕಾಣಲು, ಮುದ್ದಿಸಲು, ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳಲು ಜನರು ಹಾತೊರೆಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಲೋಕನ ಹೆಸರಲ್ಲಿ 'Aloka the Peace Dog' ಖಾತೆ ತೆರೆಯಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 4.7 ಲಕ್ಷ ಹಾಗೂ ಫೇಸ್‌ಬುಕ್‌ನಲ್ಲಿ 11 ಲಕ್ಷ ಜನರು ಹಿಂಬಾಲಿಸುತ್ತಿದ್ದಾರೆ. ಆತನ ಹಲವು ವಿಡಿಯೊಗಳು ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡು, ಲಕ್ಷಾಂತರ ಲೈಕ್‌ ಗಿಟ್ಟಿಸಿವೆ.

ಶ್ರದ್ಧೆ, ಪರಿಶ್ರಮ, ದೃಢ ಸಂಕಲ್ಪ ಹೊಂದಿರುವವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದಕ್ಕೆ ಅಲೋಕನೇ ಉದಾಹರಣೆ.

ಉಳಿವಿಗಾಗಿನ ಹೋರಾಟ ನಿರಂತರ

ಸಾಮಾನ್ಯವಾಗಿ ವನದಂಗಳಲ್ಲಿ ನಡೆಯುವ ಕಾದಾಟಗಳಲ್ಲಿ ಪರಾಭವಗೊಳ್ಳುವ ‘ಜೀವ’ ಹೆಚ್ಚಿನ ಸಂದರ್ಭಗಳಲ್ಲಿ ಪಲಾಯನ ಮಾಡಿ ಪಾರಾಗುತ್ತದೆ. ಒಂದು ವೇಳೆ ಸತ್ತರೆ, ಮತ್ತೊಂದು ಜೀವಿಗೆ ಆಹಾರವಾಗುತ್ತದೆ. ಇಲ್ಲವೇ ಅಲ್ಲೇ ಮಣ್ಣಾಗುತ್ತದೆ. ಆದರೆ, ಜಪಾನ್‌ನ ವನ್ಯಜೀವಿ ಛಾಯಾಗ್ರಾಹಕ ಕೊಯೀ ನಗಿರಾ ಅವರು ಕ್ಲಿಕ್ಕಿಸಿರುವ ಚಿತ್ರ, ಬೇರೆಯದ್ದೇ ಕಥೆ ಹೇಳುತ್ತದೆ.

ಹೆಣ್ಣನ್ನು ಒಲಿಸಿಕೊಳ್ಳುವುದಕ್ಕಾಗಿಯೋ, ಬಲ ಪ್ರದರ್ಶನಕ್ಕಾಗಿಯೋ ನಡೆದ ಕಾದಾಟದ ವೇಳೆ ಎರಡು ಸಿಕಾ ಜಿಂಕೆಗಳ ಕೋಡುಗಳು ಒಂದಕ್ಕೊಂದು ಬೆಸೆದುಕೊಂಡಿವೆ. ನಿತ್ರಾಣಗೊಂಡದ್ದು ಬಿಡಿಸಿಕೊಂಡು ಓಡಲಾಗದೆ, ಸಿಲುಕಿಕೊಂಡಿದೆ. ಸ್ವಲ್ಪ ಹೊತ್ತಿಗೆ ಅದರ ಪ್ರಾಣವೂ ಹೋಗಿದೆ. ಆದರೂ, ಕೋಡುಗಳು ಬೇರ್ಪಟ್ಟಿಲ್ಲ. ಹೀಗಾಗಿ, ಮತ್ತೊಂದು ಜಿಂಕೆ ಹೋರಾಟದಲ್ಲಿ ಗೆದ್ದರೂ ಗರ್ವದಿಂದ ತಲೆ ಎತ್ತಲಾಗದೆ ಪರಿತಪಿಸಿದೆ. ಸಾಕಷ್ಟು ದಿನಗಳವರೆಗೆ ಹೀಗೆಯೇ ಮುಂದುವರಿದಿದೆ. ಗೆದ್ದದ್ದು ಹೋಗಬೇಕಾದಲ್ಲಿಗೆಲ್ಲ ಹೆಣ ಎಳೆದುಕೊಂಡೇ ಅಲೆದಿದೆ.

ಕೊನೆಗೊಂದು ದಿನ ಶವ ಕೊಳೆತು, ದೇಹ ಹರಿದು ರುಂಡ, ಮುಂಡ ಬೇರ್ಪಟ್ಟಿವೆ. ಆದರೆ, ಆಗಲೂ ಕೋಡುಗಳು ಬಿಡಿಸಿಕೊಳ್ಳದ ಕಾರಣ ಸೋತಿದ್ದರ ರುಂಡ ಗೆದ್ದದ್ದರ ಬುರುಡೆಯ ಮೇಲೆ ಕ್ರೌರ್ಯದ ಪ್ರತಿರೂಪವಾಗಿ ಕಿರೀಟದಂತೆ ಕೂತಿದೆ. ತನ್ನಿಂದಲೇ ಸತ್ತರೂ, ಅದನ್ನು ಬಿಟ್ಟು ಬದುಕಲಾರದೆ ತಲೆಯ ಮೇಲೆ ಹೊತ್ತು ಮೆರೆಸುವಂತೆ ತಿರುಗುತ್ತಿದೆ ಬದುಕಿರುವುದು.

‘ಬಲವಿದ್ದರಷ್ಟೇ ಬದುಕು’ ಎಂಬ ಸಂದೇಶ ಸಾರುತ್ತಿರುವ ಈ ಜಿಂಕೆಯ ಕಣ್ಣುಗಳಲ್ಲಿ ಗೆದ್ದೇ ಎಂಬ ಅಹಂ ಉಳಿದಿಲ್ಲ. ಅದರ ನಿರ್ಭಾವುಕ ನೋಟವು ವೈರಾಗ್ಯ ಹುಟ್ಟಿಸುವಂತಿದೆ. ‘ಕೋಪದಲ್ಲಿ ಮಾಡಿಕೊಳ್ಳುವ ಎಡವಟ್ಟುಗಳು ಬದುಕಿನುದ್ದಕ್ಕೂ ಕಾಡಬಲ್ಲವು. ಪಶ್ಚಾತಾಪದ ನೋವು ಮನಸ್ಸನ್ನು ಕೊನೆವರೆಗೂ ಘಾಸಿಗೊಳಿಸಬಹುದು. ಉಳಿವಿಗಾಗಿನ ಹೋರಾಟ ನಿರಂತರ’ ಎಂಬಿತ್ಯಾದಿ ಎಚ್ಚರಿಕೆಗಳನ್ನೂ ನೀಡುತ್ತಿದೆ.

ಜಪಾನ್‌ನ ಹೊಕ್ಕಾಯ್ಡೊದಲ್ಲಿರುವ ಪರ್ಯಾಯ ದ್ವೀಪದಲ್ಲಿ ಕಾಣಿಸಿಕೊಂಡ ಈ ಜಿಂಕೆಯ ಚಿತ್ರವು, ಲಂಡನ್‌ ಮೂಲದ ‘ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಂ’ ಆಯೋಜಿಸಿರುವ ‘ವರ್ಷದ ವನ್ಯಜೀವಿ ಛಾಯಾಗ್ರಾಹಕ ನುವೀನ್‌ ಪೀಪಲ್ಸ್ ಚಾಯ್ಸ್ ಪ್ರಶಸ್ತಿ’ಯ ಅಂತಿಮ ಸುತ್ತಿನಲ್ಲಿದೆ.

2025ರ ಅಂತ್ಯದಲ್ಲಿ ಬೀದಿ ನಾಯಿ 'ಅಲೋಕ' ಸುದ್ದಿಯಾದ. 2026ರ ಮೊದಲ ಮಾಸದಲ್ಲಿ ಪೆಂಗ್ವಿನ್‌, ಫೆಬ್ರುವರಿಯಲ್ಲಿ ಕೋತಿ ಮರಿ 'ಪಂಚ್‌' ಹಾಗೂ ಜಿಂಕೆ ಗಮನ ಸೆಳೆದವು. ವಿಭಿನ್ನ ವರ್ತನೆ ಮೂಲಕ ಜನಮನ ಗೆದ್ದ ಈ ಪ್ರಾಣಿಗಳು, ಬದುಕಿನ ಪಾಠ ಹೇಳಲು ಮುಂದಿನ ತಿಂಗಳೂ ಯಾರಾದರೂ ಬರುವರೇ ಎಂಬ ಕುತೂಹಲ ಕೆರಳಿಸಿವೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಚರ್ಚೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.