
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಸಮರವು ತೀವ್ರ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ ಭಾರತದಲ್ಲಿ ಸುಮಾರು 25 ದಿನಗಳ ಕಚ್ಚಾ ತೈಲ ಮತ್ತು ಸಂಸ್ಕರಿಸಿದ ತೈಲ ದಾಸ್ತಾನು ಇದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಆದಾಗ್ಯೂ, ಕಚ್ಚಾ ತೈಲ, ದ್ರವೀಕೃತಕ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ), ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಆಮದು ಮಾಡಿಕೊಳ್ಳಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲಾಗುವುದು. ಸದ್ಯಕ್ಕೆ ದೇಶದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಬೆಲೆ ಹೆಚ್ಚಿಸುವ ಯಾವುದೇ ಯೋಜನೆ ಇಲ್ಲ ಎಂದೂ ಮೂಲಗಳು ಹೇಳಿವೆ.
ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಪುರಿ ಅವರು ಸಚಿವಾಲಯ ಮತ್ತು ಸಾರ್ವಜನಿಕ ವಲಯದ ಉದ್ಯಮಗಳ (ಪಿಎಸ್‌ಯು) ಹಿರಿಯ ಅಧಿಕಾರಿಗಳೊಂದಿಗೆ ಕಚ್ಚಾ ತೈಲ, ಎಲ್‌ಪಿಜಿ ಸೇರಿದಂತೆ ಇತರ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಕುರಿತು ಚರ್ಚೆ ನಡೆಸಿದ್ದಾರೆ.
ಪೆಟ್ರೋಲಿಯಂ ಸಚಿವಾಲಯವು ನಿರಂತರವಾಗಿ ಬದಲಾಗುತ್ತಿರುವ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ದೇಶದಲ್ಲಿ ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳ ಲಭ್ಯತೆ ಮತ್ತು ಕೈಗೆಟುಕುವಿಕೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಭಾರತವು ಪಶ್ಚಿಮ ಏಷ್ಯಾದ ದೇಶಗಳಿಂದ ಹೆಚ್ಚು ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಆಮದು ಮಾಡಿಕೊಳ್ಳುತ್ತದೆ.
2022ರ ಏಪ್ರಿಲ್‌ನಿಂದ ಪೆಟ್ರೋಲ್, ಡೀಸೆಲ್ ಬೆಲೆಯು ದೇಶದಲ್ಲಿ ಬದಲಾವಣೆ ಆಗಿಲ್ಲ.
ಕಚ್ಚಾ ತೈಲದ ಬೆಲೆ ಏರಿಕೆಗೆ ಪ್ರತಿಯಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆ ಹೆಚ್ಚಾದ ಸಂದರ್ಭದಲ್ಲಿ ಭಾರತದಲ್ಲಿ ಬೆಲೆ ಜಾಸ್ತಿ ಆಗಿಲ್ಲ, ಜಾಗತಿಕ ಮಟ್ಟದಲ್ಲಿ ಬೆಲೆ ತಗ್ಗಿದಾಗಲೂ ಭಾರತದಲ್ಲಿ ಬೆಲೆ ಇಳಿಕೆ ಆಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.