
ಕಿರಣ್ ರಾಜ್
ಕನ್ನಡ ಕಿರುತೆರೆ ಲೋಕದಲ್ಲಿ ಸದ್ಯ ಮಿಂಚುತ್ತಿರುವ ಪ್ರತಿಭೆ ಕಿರಣ್ ರಾಜ್. ಅವರು ನಾಯಕನಾಗಿ ನಟಿಸಿದ ಎರಡೂ ಧಾರಾವಾಹಿಗಳು (ಕನ್ನಡತಿ ಮತ್ತು ಕರ್ಣ) ಬಹು ಜನಪ್ರಿಯ. ಅಷ್ಟೆ ಅಲ್ಲ, 'ಜನ ಮೆಚ್ಚಿದ ನಾಯಕ'ನಾಗಿ ಜನಮಾನಸದಲ್ಲಿ ನೆಲೆಸಿದ್ದಾರೆ. ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು, ನಟನೆಯ ಜೊತೆಗೆ ನಿರ್ಮಾಪಕರಾಗಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಕಿರಣ್ ರಾಜ್, 2025ರ ನೆನಪು, 2026ರ ಕನಸುಗಳನ್ನು ‘ಪ್ರಜಾವಾಣಿ ಡಿಜಿಟಲ್’ ನೊಂದಿಗೆ ಹಂಚಿಕೊಂಡದ್ದು ಹೀಗೆ.
2025 ನಿಮ್ಮ ಪಾಲಿಗೆ ಹೇಗಿತ್ತು?
2025 ನನಗಂತೂ ತುಂಬ ಫಲಪ್ರದವಾಗಿತ್ತು. 'ಕರ್ಣ' ಧಾರಾವಾಹಿ ನಂಬರ್ ಒನ್ ಸ್ಥಾನಕ್ಕೇರಿತು, ಜೊತೆಗೆ ಉತ್ತಮ ವಿಮರ್ಶೆ ಅಭಿಪ್ರಾಯಗಳೂ ವ್ಯಕ್ತವಾದವು. 'ಜಾಕಿ 42' ಎನ್ನುವ ದೊಡ್ಡ ಮೊತ್ತದ ಸಿನಿಮಾ ಶುರುವಾಯಿತು. ಇದೇ ವರ್ಷ ಅದರ ಕೆಲಸ ಕಾರ್ಯಗಳೂ ಮುಗಿದವು. ವೆಬ್ ಸರಣಿ ನಿರ್ಮಾಣದ ಮೂಲಕ ನಾನೊಬ್ಬ ನಿರ್ಮಾಪಕನಾದೆ. ವೆಬ್ ಸರಣಿ ಕೂಡ ನಂಬರ್ ಒನ್ ಆಯಿತು. ಹೆಣ್ಣುಮಗುವಿನ ಜನನ ಪ್ರಮಾಣಕ್ಕೆ ಸಂಬಂಧಿಸಿ ನನ್ನ ಸಂಸ್ಥೆಯಿಂದ ಕೆಲವೊಂದಿಷ್ಟು ಚಟುವಟಿಕೆಗಳನ್ನು ನಡೆಸಿದ್ದು, ಯಶಸ್ವಿಯಾಯಿತು. ಒಟ್ಟಾರೆ ಇಡೀ ವರ್ಷ ಬಹಳ ಚೆನ್ನಾಗಿತ್ತು.
2025ರ ಸಿಹಿ ನೆನಪು ಏನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಸತತ ಮೂರು ವರ್ಷ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದುಕೊಂಡಿದ್ದೆ. ಈ ಬಾರಿ ಜೀ ಕನ್ನಡದಲ್ಲಿಯೂ ಜನಮೆಚ್ಚಿದ ನಾಯಕ ಎನಿಸಿಕೊಂಡಿದ್ದು ಖುಷಿ ಅನಿಸಿತು. ಹಾಗೆ ನೋಡಿದರೆ ಇಡೀ ವರ್ಷವೇ ಸಿಹಿ ನೆನಪುಗಳೊಂದಿಗೆ ತುಂಬಿತ್ತು. ಈಗ ಹಿಂತಿರುಗಿ ನೋಡುವಾಗ ಕಾಲ ಇಷ್ಟು ಬೇಗ ಓಡಿತೋ ಅಥವಾ ನಾವೇ ಓಡಿಬಂದವೋ ಅನಿಸುತ್ತದೆ.
ಏನಾದರೂ ಕಹಿ ನೆನಪು?
ನನಗೆ ನಿರಂತರ ಕೆಲಸ ಕಾರ್ಯದ ನಡುವೆ ಕಹಿ ಘಟನೆಗಳ ಕಡೆ ಗಮನ ಕೊಡುವುದಕ್ಕೂ ಸಮಯ ಸಿಗಲಿಲ್ಲ. ಬಹುತೇಕ ಸಕಾರಾತ್ಮಕ ಮನೋಭಾವ ಹೊಂದಿರುವುದರಿಂದ ಅದರಲ್ಲಿಯೇ ದಿನಗಳು ಕಳೆದುಹೋದವು. ತಾಳೆಮಾಡಿ ನೋಡುವಾಗ ಒಳ್ಳೆಯ ಘಟನೆಗಳೇ ಹೆಚ್ಚು ನಡೆದಿರುವುದರಿಂದ ಕಹಿ ನೆನಪುಗಳು ಇದ್ದರೂ ಲಕ್ಷ್ಯಕ್ಕೆ ಬರಲಿಲ್ಲ ಅನಿಸುತ್ತದೆ.
ಹೊಸ ವರ್ಷದಲ್ಲಿ ನಿಮ್ಮ ಹೊಸ ಯೋಜನಗಳು ಏನೇನು?
ಹೊಸ ವರ್ಷದಲ್ಲಿ ಬಹಳಷ್ಟು ಯೋಜನೆಗಳಿವೆ. ನಾನು ಹೆಚ್ಚಾಗಿ ಯೋಜನೆಗಳನ್ನು ಹಾಕಿಕೊಂಡೇ ಕೆಲಸ ಮಾಡುವವನು. ಈಗ ನಿರ್ಮಾಪಕನಾಗಿಯೂ ಹೊಸ ಪಯಣ ಶುರು ಮಾಡಿರುವುದರಿಂದ ಆ ನಿಟ್ಟಿನಲ್ಲಿಯೂ ಒಂದಿಷ್ಟು ಯೋಜನೆಗಳಿವೆ. ನನ್ನ ಆರಂಭಿಕ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಅನುಭವಿಸಿದ ಕಷ್ಟ ಮುಂದಿನ ತಲೆಮಾರು ಅನುಭವಿಸಬಾರದು ಎನ್ನುವ ನಿಟ್ಟಿನಲ್ಲಿ ಅವಕಾಶ, ಜ್ಞಾನಕ್ಕೆ ಸಂಬಂಧಿಸಿ ಕೆಲವು ಅನುಕೂಲಗಳನ್ನು ಅವರಿಗಾಗಿ ಮಾಡಬೇಕು ಎಂದುಕೊಂಡಿದ್ದೇನೆ. ಯೋಜನೆಯಂತೆಯೇ 'ಜಾಕಿ 42' ಸಿನಿಮಾ ಈ ವರ್ಷ ಬಿಡುಗಡೆಯಾಗಲಿದೆ. ಕರ್ಣ ಧಾರಾವಾಹಿಯೂ ಮುಂದುವರಿಯಲಿದೆ. ನನ್ನ ಫೌಂಡೇಶನ್ ಅಡಿಯಲ್ಲಿ ಒಂದಿಷ್ಟು ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶ ಇದೆ. ಮುಖ್ಯವಾಗಿ ಶಿಕ್ಷಣ ಹಾಗೂ ಹಿರಿಯರ ಆರೋಗ್ಯಕ್ಕೆ ಸಂಬಂಧಿಸಿ ಒಂದಿಷ್ಟು ಕಾರ್ಯಕ್ರಮ ಹಮ್ಮಿಕೊಳ್ಳುವೆ.
ಮುಂದಿನ ವರ್ಷದಿಂದ ಬದುಕಿನಲ್ಲಿ ಏನಾದರೂ ಬದಲಾವಣೆ ಮಾಡಿಕೊಳ್ಳಬೇಕು ಎಂದರೆ...
ಇಲ್ಲಿಯವರೆಗೆ ಬದಲಾಗುತ್ತಲೇ ಮಾಗುತ್ತ ಈ ಹಂತಕ್ಕೆ ಬಂದಿದ್ದೇನೆ. ಇದನ್ನೂ ಬದಲಾಯಿಸಿಬಿಟ್ಟರೆ ಕಷ್ಟ ಆಗುತ್ತೆ (ನಗು). ವೃತ್ತಿಜೀವನದಲ್ಲಿ ಶಿಸ್ತು ಅಳವಡಿಸಿಕೊಂಡಿದ್ದೇನೆ. ಏನೇ ಇದ್ದರೂ, ಸೆಟ್‌ನಲ್ಲಿ ಶಿಸ್ತುಬದ್ಧವಾಗಿ ನನ್ನ ಕೆಲಸಕ್ಕೆ ಸಂಪೂರ್ಣ ಅರ್ಪಿಸಿಕೊಂಡು ಇರುತ್ತೇನೆ. ನನಗೆ ಹೆಚ್ಚಿನ ಅವಕಾಶಗಳು ಸಿಗುತ್ತಿರುವುದಕ್ಕೆ ಅದೂ ಕಾರಣ ಇರಬಹುದು. ಬೆಳೆಸಿಕೊಂಡು ಬಂದಿರುವ ವ್ಯಕ್ತಿತ್ವವನ್ನು ಉಳಿಸಿಕೊಂಡು ಸಾಗುತ್ತೇನೆ.
ಅಭಿಮಾನಿಗಳಿಗೆ, ಜನತೆಗೆ ಹೊಸ ವರ್ಷದ ಹೊಸ ಸಂದೇಶ ಕೊಡಬಹುದಾ?
ಆತ್ಮತೃಪ್ತಿ ಎನ್ನುವುದು ಮುಖ್ಯ. ಅದಕ್ಕೆ ಅನುಗುಣವಾಗಿ ಕೆಲಸ ಮಾಡಿ. ಬದುಕಿನಲ್ಲಿ ಯಾವುದೇ ಸಂದರ್ಭ ಎದುರಾದರೂ ಅದನ್ನು ಒಬ್ಬರೇ ಎದುರಿಸಬೇಕಾಗುತ್ತದೆ. ಹಾಗಾಗಿ ನಿಮ್ಮ ಬದುಕನ್ನು ಉಳಿದವರ ದೃಷ್ಟಿಕೋನದಿಂದ ನೋಡುವ ಬದಲು ನಿಮ್ಮ ದೃಷ್ಟಿಕೋನದಿಂದ ನೋಡಿರಿ. ಖುಷಿಯಾಗಿರಿ. ಸಮಾಜವನ್ನು ಸಂತುಷ್ಟಗೊಳಿಸಲು ಹೋಗಬೇಡಿ. ನಿಮ್ಮ ಆತ್ಮವನ್ನು ಸಂತುಷ್ಟಗೊಳಿಸಿ. ಅಷ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.