ADVERTISEMENT

ವಿಪಕ್ಷಗಳಿರುವ ರಾಜ್ಯ ಸರ್ಕಾರ ಉರುಳಿಸಲು ಕೇಂದ್ರದ ಹೊಸ ಮಸೂದೆ: TMC ಸಂಸದರ ಆರೋಪ

ಪಿಟಿಐ
Published 20 ಆಗಸ್ಟ್ 2025, 5:53 IST
Last Updated 20 ಆಗಸ್ಟ್ 2025, 5:53 IST
<div class="paragraphs"><p>ಸಾಕೇತ್ ಗೋಖಲೆ,&nbsp; ಮಹುವಾ&nbsp;ಮೊಯಿತ್ರಾ,&nbsp; ಡೆರೆಕ್‌ ಒಬ್ರಯಾನ್</p></div>

ಸಾಕೇತ್ ಗೋಖಲೆ,  ಮಹುವಾ ಮೊಯಿತ್ರಾ,  ಡೆರೆಕ್‌ ಒಬ್ರಯಾನ್

   

ಪಿಟಿಐ ಚಿತ್ರ

ನವದೆಹಲಿ: ‘ವಿರೋಧಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳನ್ನು ಉರುಳಿಸಲು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳಿಗೆ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಹೊಸ ಮಸೂದೆ ತರುತ್ತಿದೆ’ ಎಂದು ತೃಣಮೂಲ ಕಾಂಗ್ರೆಸ್‌ನ ಸಂಸದರು ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

ADVERTISEMENT

ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುವಂಥ ಯಾವುದೇ ಗಂಭೀರ ಕ್ರಿಮಿನಲ್ ಆರೋಪದಲ್ಲಿ ಬಂಧಿತರಾಗಿ 30 ದಿನಗಳ ಕಾಲ ಜೈಲಿನಲ್ಲಿದ್ದರೆ ಅಂಥವರ ಅಧಿಕಾರ 31ನೇ ದಿನ ರದ್ದಾಗಲಿದೆ ಎಂಬುದು ಈ ಮಸೂದೆಯ ವಿಶೇಷ. ಪ್ರಧಾನಿ, ಮುಖ್ಯಮಂತ್ರಿ ಇಲ್ಲವೆ ಸಚಿವರು ಗಂಭೀರ ಆರೋಪ ಹೊತ್ತು ಸತತ 30 ದಿನ ಬಂಧನದಲ್ಲಿದ್ದರೆ ಅವರನ್ನು ಪದಚ್ಯುತಗೊಳಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಬುಧವಾರ ಮಂಡಿಸಲಿದೆ.

TMC ಸಂಸದ ಸಾಕೇತ್ ಗೋಖಲೆ ಹೇಳಿದ್ದೇನು?

ಮಸೂದೆಗಳ ಕುರಿತು ಮಾತನಾಡಿರುವ ರಾಜ್ಯಸಭೆಯ ಟಿಎಂಸಿ ಸಂಸದ ಸಾಕೇತ್ ಗೋಖಲೆ, ‘ರಾಜ್ಯ ಸರ್ಕಾರಗಳನ್ನು ಉರುಳಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಹೊಸ ತಂತ್ರವನ್ನು ರೂಪಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಷಯ ಹಂಚಿಕೊಂಡಿರುವ ಅವರು, ‘ಮತಗಳವು ಹಗರಣ ಬಯಲಿಗೆ ಬರುತ್ತಿದ್ದಂತೆ, ಮೋದಿ ಮತ್ತು ಶಾ ಜೋಡಿ ಹೊಸ ತಂತ್ರ ಹೂಡಿದೆ. ರಾಜ್ಯ ಸರ್ಕಾರಗಳನ್ನು ಉರುಳಿಸಲು ಸಿಬಿಐ ಮತ್ತು ಇಡಿಗೆ ಅವಕಾಶ ಕಲ್ಪಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಯಾವುದೇ ವ್ಯಕ್ತಿ ಶಿಕ್ಷೆಗೆ ಗುರಿಯಾದಾಗ ಮಾತ್ರ ಆತ ಅಪರಾಧಿ ಎಂದು ಪರಿಗಣಿಸಲಾಗುತ್ತದೆ. ಅಲ್ಲಿಯವರೆಗೂ ಅವರೊಬ್ಬ ‘ಆರೋಪಿ’ಯಷ್ಟೇ. ಕೇವಲ ಆರೋಪದ ಆಧಾರದಲ್ಲಿ ಮುಖ್ಯಮಂತ್ರಿ ಅಥವಾ ಮಂತ್ರಿಗಳನ್ನು ಹುದ್ದೆಯಿಂದ ತೆಗೆಯಲಾಗದು. ಮೋದಿ–ಶಾ ಅವರ ಕೇಂದ್ರೀಯ ಏಜೆನ್ಸಿಗಳು ಬಂಧಿಸಿದರೆ ಮಾತ್ರ ಅದು ತಪ್ಪೆಸಗಿರುವುದಕ್ಕೆ ಪುರಾವೆಯಲ್ಲ’ ಎಂದಿದ್ದಾರೆ.

‘ಆಸಕ್ತಿಕರ ವಿಷಯವೆಂದರೆ ಕಳೆದ 11 ವರ್ಷಗಳಲ್ಲಿ ಕೇಂದ್ರ ಮತ್ತು ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯಗಳಲ್ಲಿ ಆಡಳಿತ ಪಕ್ಷದವರ ಒಬ್ಬರ ಬಂಧನವೂ ಆಗಿಲ್ಲ. ಉಳಿದೆಲ್ಲವೂ ವಿರೋಧ ಪಕ್ಷಗಳಿರುವ ರಾಜ್ಯಗಳಲ್ಲೇ ನಡೆದಿದೆ’ ಎಂದು ಆರೋಪಿಸಿದ್ದಾರೆ.

ಮಹುವಾ ಮೊಯಿತ್ರಾ ಆರೋಪಗಳೇನು?

ಟಿಎಂಸಿ ಸಂಸದ ಮಹುವಾ ಮೊಯಿತ್ರಾ ಪ್ರತಿಕ್ರಿಯಿಸಿ, ‘ಈ ಮಸೂದೆಯು ಒಕ್ಕೂಟ ಸರ್ಕಾರ ಮತ್ತು ನ್ಯಾಯಾಂಗ ಎರಡನ್ನೂ ಕಡೆಗಣಿಸಿದೆ’ ಎಂದಿದ್ದಾರೆ.

‘ಕೇವಲ 240 ಸಂಸದರನ್ನು ಹೊಂದಿರುವ ಬಿಜೆಪಿ ಸಂವಿಧಾನವನ್ನು ಬದಲಿಸುತ್ತದೆ ಎಂಬ ವಿರೋಧಪಕ್ಷಗಳ ನಿರೀಕ್ಷೆ ನಿಜವಾಗಿದೆ. ವಿರೋಧಪಕ್ಷಗಳ ಆಡಳಿತವಿರುವ ಮುಖ್ಯಮಂತ್ರಿಗಳನ್ನು ಸುಳ್ಳು ಆರೋಪಗಳಡಿ ಇಡಿ ಮತ್ತು ಸಿಬಿಐ ಬಂಧಿಸಬಹದು ಮತ್ತು ನ್ಯಾಯಾಲಯ ಅಪರಾಧಿ ಎಂದು ಘೋಷಿಸುವ ಮೊದಲೇ ಅವರನ್ನು ಸ್ಥಾನದಿಂದ ಕಿತ್ತೊಗೆಯಬಹುದಾಗಿದೆ. ಇದು ಬಲಿಷ್ಠ ನ್ಯಾಯಾಂಗ ಹಾಗೂ ಒಕ್ಕೂಟ ರಚನೆಯ ಸರ್ಕಾರ ಇರುವ ರಾಷ್ಟ್ರದಲ್ಲೇ ಆಗುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. 

ಡೆರೆಕ್ ಒಬ್ರಿಯಾನ್‌ ಟ್ವೀಟ್ ಏನು ಹೇಳುತ್ತದೆ?

ರಾಜ್ಯಸಭೆಯ ಟಿಎಂಸಿ ಸಂಸದ ಡೆರೆಕ್‌ ಒಬ್ರಯಾನ್ ಪ್ರತಿಕ್ರಿಯಿಸಿ, ‘240 ಅಲ್ಪ ಸದಸ್ಯರನ್ನು ಹೊಂದಿರುವ ಮೋದಿ ಸಮ್ಮಿಶ್ರ ಸರ್ಕಾರವು ಸಂಸತ್ತಿನಲ್ಲಿ ಇನ್ನಷ್ಟು ಸಮಸ್ಯೆ ಸೃಷ್ಟಿಸಲು ಕರಾಳ ರಾತ್ರಿಯಲ್ಲಿ ಹೊಸ ಸಾಹಸಗಳಿಗೆ ಕೈಹಾಕಿದೆ’ ಎಂದಿದ್ದಾರೆ.

ಕೇಂದ್ರಾಡಳಿತ ಪ್ರದೇಶ ಸರ್ಕಾರ (ತಿದ್ದುಪಡಿ) ಮಸೂದೆ 2025, ಸಂವಿಧಾನ (113ನೇ ತಿದ್ದುಪಡಿ) ಮಸೂದೆ 2025 ಹಾಗೂ ಜಮ್ಮು ಮತ್ತು ಕಾಶ್ಮೀರ ಪನಾರಚನೆ (ತಿದ್ದುಪಡಿ) ಮಸೂದೆ 2025 ಬುಧವಾರ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಮೂರೂ ಮಸೂದೆಗಳನ್ನು ಜಂಟಿ ಸದನ ಸಮಿತಿಗೆ ಶಿಫಾರಸು ಮಾಡುವ ಪ್ರಸ್ತಾವನೆಯನ್ನು ಮುಂದಿಡಲಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.