ADVERTISEMENT

ಏನು ಮಾಡಬೇಕು, ಏನು ಮಾಡಬಾರದೆಂದು ಇತರರು ನಮಗೆ ಹೇಳಲು ಸಾಧ್ಯವಿಲ್ಲ: ಇರಾನ್‌ ಸಚಿವ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 11:27 IST
Last Updated 23 ಜೂನ್ 2025, 11:27 IST
<div class="paragraphs"><p>ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.</p></div>

ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

   

ದುಬೈ: ನಾವು ಏನು ಮಾಡಬೇಕು ಅಥವಾ ಏನು ಮಾಡಬಾರದು ಎಂದು ಇತರರು ನಮಗೆ ಹೇಳಲು ಸಾಧ್ಯವಿಲ್ಲ ಎಂದು ಇರಾನ್‌ನ ಉಪ ವಿದೇಶಾಂಗ ಸಚಿವ ಮಜೀದ್ ತಖ್ತ್-ರಾವಂಚಿ ಹೇಳಿದ್ದಾರೆ.

ಜರ್ಮನಿಯ ಎಆರ್‌ಡಿ ದೂರದರ್ಶನದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಅಂತರರಾಷ್ಟ್ರೀಯ ಕಾನೂನು ಮತ್ತು ಅಣ್ವಸ್ತ್ರ ನಿಶ್ಶಸ್ತ್ರೀಕರಣ ಒಪ್ಪಂದದ (ಎನ್‌ಪಿಟಿ) ಪ್ರಕಾರವೇ ಪರಮಾಣು ಯೋಜನೆಗಳಿಗೆ ಬೇಕಾದ ಯುರೇನಿಯಂ ಅನ್ನು ಉತ್ಪಾದಿಸಲಾಗುತ್ತದೆ ಎಂಬ ಇರಾನ್‌ನ ಬದ್ಧತೆಯನ್ನು ಪುನರುಚ್ಚರಿಸುತ್ತೇನೆ’ ಎಂದು ಹೇಳಿದ್ದಾರೆ.

ADVERTISEMENT

‘ಇರಾನ್‌ನ ಫೋರ್ಡೊ, ನಟಾನ್ಜ್ ಹಾಗೂ ಎಸ್‌ಫಹಾನ್‌ನಲ್ಲಿರುವ ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ಬಾಂಬ್ ದಾಳಿಯನ್ನು ಖಂಡಿಸಿರುವ ರಾವಂಚಿ, ‘ಇದೊಂದು ಆಕ್ರಮಣಕಾರಿ ಕೃತ್ಯ’ವೆಂದು ಕರೆದಿದ್ದಾರೆ. ಜತೆಗೆ, ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಪ್ರತಿಕ್ರಿಯಿಸುವ ಇರಾನ್‌ನ ಹಕ್ಕನ್ನು ಸಮರ್ಥಿಸಿಕೊಂಡಿದ್ದಾರೆ.

ಇರಾನ್‌ ಪರಮಾಣು ಚಟುವಟಿಕೆಗಳನ್ನು ನಿಲ್ಲಿಸಬೇಕೆಂಬ ಪಾಶ್ಚಿಮಾತ್ಯ ರಾಷ್ಟ್ರಗಳ ಬೇಡಿಕೆಗಳನ್ನು ರಾವಂಚಿ ಬಲವಾಗಿ ತಿರಸ್ಕರಿಸಿದ್ದು, ಯಾವುದೇ ದೇಶವು ಇರಾನ್‌ನ ಶಾಂತಿಯುತ ಪರಮಾಣು ನೀತಿಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

‘ನಾವು ಅಣ್ವಸ್ತ್ರ ನಿಶ್ಶಸ್ತ್ರೀಕರಣ ಒಪ್ಪಂದದ (ಎನ್‌ಪಿಟಿ) ಅನ್ವಯ ಶಾಂತಿಯುತ ಉದ್ದೇಶ ಮತ್ತು ರಾಷ್ಟ್ರೀಯ ಅಗತ್ಯಗಳನ್ನು ಪೂರೈಸಲು ಯುರೇನಿಯಂ ಉತ್ಪಾದನೆಯನ್ನು ಮುಂದುವರಿಸುತ್ತೇವೆ.‌ ನಾವು ಎನ್‌ಪಿಟಿ ನಿಯಮಗಳ ಚೌಕಟ್ಟಿನೊಳಗೆ ಇರುವವರೆಗೆ ಏನು ಮಾಡಬೇಕು ಅಥವಾ ಏನು ಮಾಡಬಾರದು ಎಂದು ಇತರರು ನಮಗೆ ಹೇಳಲು ಸಾಧ್ಯವಿಲ್ಲ’ ಎಂದಿದ್ದಾರೆ.

ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷದಲ್ಲಿ ಮಧ್ಯಪ್ರವೇಶಿಸುವ ಕುರಿತು ಶೀಘ್ರವೇ ನಿರ್ಧರಿಸಲಾಗುವುದು ಎಂದು ಹೇಳುತ್ತಿದ್ದ ಅಮೆರಿಕ, ಶನಿವಾರ ತಡರಾತ್ರಿ ಇರಾನ್‌ನ ಮೂರು ಪ್ರಮುಖ ಪರಮಾಣು ಘಟಕಗಳ ಮೇಲೆ ಭಾರಿ ಬಾಂಬ್‌ ದಾಳಿ ನಡೆಸಿತ್ತು.

‘ಆಪರೇಷನ್‌ ಮಿಡ್‌ನೈಟ್‌ ಹ್ಯಾಮರ್’ ಹೆಸರಿನ ಸೇನಾ ಕಾರ್ಯಾಚರಣೆ ನಡೆಸುವ ಮೂಲಕ, ಇರಾನ್‌ ವಿರುದ್ಧ ಇಸ್ರೇಲ್‌ ಸಾರಿರುವ ಯುದ್ಧವನ್ನು ಅಮೆರಿಕ ಅಧಿಕೃತವಾಗಿ ಪ್ರವೇಶಿಸಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.