ಬೆಂಜಮಿನ್ ನೆತನ್ಯಾಹು
(ಪಿಟಿಐ ಚಿತ್ರ)
ಲಂಡನ್: ಗಾಜಾಪಟ್ಟಿಯಲ್ಲಿ ಹೊಸ ಮಿಲಿಟರಿ ದಾಳಿಯನ್ನು ನಿಲ್ಲಿಸದಿದ್ದರೆ ಹಾಗೂ ನೆರವು ನಿರ್ಬಂಧಗಳನ್ನು ತೆಗೆದುಹಾಕದಿದ್ದರೆ ಇಸ್ರೇಲ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬ್ರಿಟನ್, ಫ್ರಾನ್ಸ್ ಮತ್ತು ಕೆನಡಾ ನಾಯಕರು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೇಲೆ ಮತ್ತಷ್ಟು ಒತ್ತಡ ಹೇರುವ ಪ್ರಯತ್ನ ಮಾಡಿದ್ದಾರೆ.
ಇಸ್ರೇಲ್ ಇಡೀ ಗಾಜಾವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ ಎಂದು ಬೆಂಜಮಿನ್ ನೆತನ್ಯಾಹು ಅವರು ಸೋಮವಾರ ಹೇಳಿದ್ದರು. ಇದರ ಬೆನ್ನಲ್ಲೇ ಬ್ರಿಟನ್, ಫ್ರಾನ್ಸ್ ಮತ್ತು ಕೆನಡಾ ನಾಯಕರು ಅಕ್ರೋಶ ಹೊರಹಾಕಿದ್ದಾರೆ.
ನಾಗರಿಕರ ಅಗತ್ಯ ಮಾನವೀಯ ಸಹಾಯವನ್ನು ನಿರಾಕರಿಸುವ ಇಸ್ರೇಲ್ ಸರ್ಕಾರದ ನಿರ್ಧಾರಗಳು ಸ್ವೀಕಾರಾರ್ಹವಲ್ಲ ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸಿದ್ದಂತಾಗುತ್ತದೆ ಎಂದು ಬ್ರಿಟನ್, ಫ್ರಾನ್ಸ್ ಮತ್ತು ಕೆನಡಾ ನಾಯಕರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ವಸಾಹತುಗಳನ್ನು ವಿಸ್ತರಿಸುವ ಯಾವುದೇ ಪ್ರಯತ್ನವನ್ನು ನಾವು ವಿರೋಧಿಸುತ್ತೇವೆ. ಹಾಗೆಯೇ ಗಾಜಾಪಟ್ಟಿ ಮೇಲಿನ ದಾಳಿಯನ್ನು ನಿಲ್ಲಿಸದಿದ್ದರೆ ನಿರ್ಬಂಧಗಳು ಸೇರಿದಂತೆ ಮುಂದಿನ ಕ್ರಮ ತೆಗೆದುಕೊಳ್ಳಲು ನಾವು ಹಿಂಜರಿಯುವುದಿಲ್ಲ ಎಂದೂ ಬ್ರಿಟನ್, ಫ್ರಾನ್ಸ್ ಮತ್ತು ಕೆನಡಾ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ಹಾಗೂ ಹಮಾಸ್ ನಡುವಿನ ಸಂಘರ್ಷವನ್ನು ಶಮನ ಗೊಳಿಸಲು ನಡೆಯುತ್ತಿರುವ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಾಣಿಸಿಲ್ಲ. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಶ್ಚಿಮ ಏಷ್ಯಾ ಪ್ರವಾಸವನ್ನು ಕೊನೆಗೊಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮಕ್ಕೆ ನಾಂದಿ ಹಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಇಸ್ರೇಲ್ ಮಧ್ಯಪ್ರಾಚ್ಯದಿಂದ ದೂರ ಉಳಿದ ಕಾರಣ ನಿರೀಕ್ಷೆ ಹುಸಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.