ADVERTISEMENT

'ಜೀವನ ಅನಿರೀಕ್ಷಿತವಾದದ್ದು': ಫುಟ್‌ಬಾಲ್ ತಾರೆ ಜೋಟಾಗೆ ಗೌರವ ಸಮರ್ಪಿಸಿದ ಸಿರಾಜ್

ಪಿಟಿಐ
Published 12 ಜುಲೈ 2025, 14:04 IST
Last Updated 12 ಜುಲೈ 2025, 14:04 IST
<div class="paragraphs"><p>ಪೋರ್ಚುಗಲ್‌ ಫುಟ್‌ಬಾಲ್‌ ತಂಡದ ಫಾರ್ವರ್ಡ್‌ ಆಟಗಾರ ಡಿಯಾಗೊ ಜೋಟಾ ಅವರಿಗೆ ಗೌರವ ಸಮರ್ಪಿಸಿದ ಮೊಹಮ್ಮದ್ ಸಿರಾಜ್‌</p></div>

ಪೋರ್ಚುಗಲ್‌ ಫುಟ್‌ಬಾಲ್‌ ತಂಡದ ಫಾರ್ವರ್ಡ್‌ ಆಟಗಾರ ಡಿಯಾಗೊ ಜೋಟಾ ಅವರಿಗೆ ಗೌರವ ಸಮರ್ಪಿಸಿದ ಮೊಹಮ್ಮದ್ ಸಿರಾಜ್‌

   

ಪಿಟಿಐ ಚಿತ್ರ

ಲಂಡನ್‌: ಇತ್ತೀಚೆಗೆ ಕಾರು ಅಪಘಾತದಲ್ಲಿ ಮೃತಪಟ್ಟ ಪೋರ್ಚುಗಲ್‌ ಫುಟ್‌ಬಾಲ್‌ ಆಟಗಾರ ಡಿಯಾಗೊ ಜೋಟಾ (28) ಅವರನ್ನು ನೆನೆದು ಭಾರತದ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಭಾವುಕರಾಗಿದ್ದಾರೆ.

ADVERTISEMENT

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯವು ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ಇನಿಂಗ್ಸ್‌ನಲ್ಲಿ ಎರಡು ವಿಕೆಟ್‌ ಗಳಿಸಿದ ಸಿರಾಜ್‌, 2ನೇ (ಜೆಮೀ ಸ್ಮಿತ್) ವಿಕೆಟ್‌ ಪಡೆದ ನಂತರ ಕೈ ಬೆರಳುಗಳನ್ನು '20' (ಜೋಟಾ ಅವರ ಜೆರ್ಸಿ ಸಂಖ್ಯೆ) ಆಕಾರದಲ್ಲಿ ಪ್ರದರ್ಶಿಸಿದರು. ನಂತರ ಎರಡೂ ಕೈಗಳನ್ನು ಮೇಲೆತ್ತುವ ಮೂಲಕ ಜೋಟಾಗೆ ಗೌರವ ಸಲ್ಲಿಸಿದರು.

ಲಿವರ್‌ಪೂಲ್‌ ಕ್ಲಬ್ ಪರ ಆಡುತ್ತಿದ್ದ ಜೋಟಾ ಹಾಗೂ ಅವರ ಸಹೋದರ ಆ್ಯಂಡ್ರೆ ಸಿಲ್ವಾ (25) ಅವರು, ಜುಲೈ 2ರ ತಡರಾತ್ರಿ ಸಂಭವಿಸಿದ್ದ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.

ಲಾರ್ಡ್ಸ್‌ ಟೆಸ್ಟ್‌ನ 2ನೇ ದಿನದಾಟದ ಬಳಿಕ ಮಾತನಾಡಿರುವ ಸಿರಾಜ್‌, 'ಡಿಯಾಗೊ ಜೋಟಾ ಅವರು ಕಾರು ಅಪಘಾತದಲ್ಲಿ ನಿಧನರಾಗಿರುವ ಸುದ್ದಿ ಕಳೆದ (ಎಜ್‌ಬಾಸ್ಟನ್‌) ಪಂದ್ಯದ ವೇಳೆ ತಿಳಿಯಿತು. ನಾನು ಪೋರ್ಚುಗಲ್‌ ತಂಡದ ಅಭಿಮಾನಿಯಾಗಿರುವುದರಿಂದ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಆ ತಂಡದ ಪರ ಆಡುವುದರಿಂದ ಭಾವುಕನಾದೆ' ಎಂದಿದ್ದಾರೆ.

'ಕಳೆದ ಪಂದ್ಯದ ವೇಳೆಯೇ ಗೌರವ ಸಮರ್ಪಣೆ ಮಾಡಲು ಬಯಸಿದ್ದೆ' ಎಂದಿರುವ ಸಿರಾಜ್‌, 'ಡಿಯಾಗೊ ಜೋಟಾಗೆ ಗೌರವ ಸಲ್ಲಿಸಬೇಕು ಎಂದುಕೊಂಡಿದ್ದೇನೆ ಎಂದು ಕುಲದೀಪ್‌ ಯಾದವ್‌ಗೆ ಹೇಳಿದ್ದೆ. ಇಂದು (ಶುಕ್ರವಾರ) ವಿಕೆಟ್‌ ಗಳಿಸಿದ್ದರಿಂದ ಸಂಕೇತದ ಮೂಲಕ ಗೌರವಿಸಿದೆ' ಎಂದು ತಿಳಿಸಿದ್ದಾರೆ.

ಎಜ್‌ಬಾಸ್ಟನ್‌ ಟೆಸ್ಟ್‌ನಲ್ಲಿ 336 ರನ್‌ ಅಂತರದ ಜಯ ಸಾಧಿಸಿರುವ ಭಾರತ, ಸರಣಿಯನ್ನು 1–1 ಅಂತರದಿಂದ ಸಮಬಲ ಮಾಡಿಕೊಂಡಿದೆ. ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ ಉರುಳಿಸಿದ್ದ ಸಿರಾಜ್‌, ನಂತರದ ಇನಿಂಗ್ಸ್‌ನಲ್ಲಿ 1 ವಿಕೆಟ್‌ ಪಡೆದು ಗೆಲುವಿಗೆ ಕೊಡುಗೆ ನೀಡಿದ್ದರು.

'ಜೋಟಾ ಅವರ ಸಾವಿನ ಸುದ್ದಿ ತಿಳಿದು ಆಘಾತವಾಯಿತು' ಎಂದಿರುವ ಸಿರಾಜ್‌, 'ಮುಂದಿನ ಕ್ಷಣದಲ್ಲಿ ಏನಾಗಲಿದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಜೀವನ ಅನಿರೀಕ್ಷಿತವಾದದ್ದು' ಎಂದು ಭಾವುಕರಾಗಿದ್ದರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.