ADVERTISEMENT

ಉದ್ಘಾಟನಾ ಪಂದ್ಯದಲ್ಲಿ ಮತ್ತೆ RCB–KKR ಮುಖಾಮುಖಿ: 17 ವರ್ಷಗಳ ಹಿಂದೆ ಏನಾಗಿತ್ತು?

ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಆರ್‌ಸಿಬಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮಾರ್ಚ್ 2025, 13:51 IST
Last Updated 22 ಮಾರ್ಚ್ 2025, 13:51 IST
<div class="paragraphs"><p>ಕೋಲ್ಕತ್ತ ನೈಟ್‌ ರೈಡರ್ಸ್‌ ನಾಯಕ ಅಜಿಂಕ್ಯ ರಹಾನೆ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಬ್ಯಾಟರ್‌ ವಿರಾಟ್‌ ಕೊಹ್ಲಿ</p></div>

ಕೋಲ್ಕತ್ತ ನೈಟ್‌ ರೈಡರ್ಸ್‌ ನಾಯಕ ಅಜಿಂಕ್ಯ ರಹಾನೆ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಬ್ಯಾಟರ್‌ ವಿರಾಟ್‌ ಕೊಹ್ಲಿ

   

ಪಿಟಿಐ ಚಿತ್ರಗಳು

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 18ನೇ ಆವತ್ತಿಯ ಉದ್ಘಾಟನಾ ಪಂದ್ಯಕ್ಕೆ ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ನಲ್ಲಿ ವೇದಿಕೆ ಸಜ್ಜಾಗಿದೆ. ಹಾಲಿ ಚಾಂಪಿಯನ್‌ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಶುಭಾರಂಭದ ನಿರೀಕ್ಷೆಯಲ್ಲಿವೆ.

ADVERTISEMENT

ಈ ತಂಡಗಳು ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ 2008ರಲ್ಲಿ ಅಂದರೆ, ಚೊಚ್ಚಲ ಆವೃತ್ತಿಯ ಮೊದಲ ಪಂದ್ಯದಲ್ಲಿ ಸೆಣಸಾಟ ನಡೆಸಿದ್ವವು.

ಈಡನ್‌ ಗಾರ್ಡನ್ಸ್‌ನಲ್ಲೇ ನಡೆದಿದ್ದ ಆ ಪಂದ್ಯದಲ್ಲಿ ಕೆಕೆಆರ್‌, 140 ರನ್‌ಗಳಿಂದ ಗೆದ್ದು ಬೀಗಿತ್ತು.

ಟಾಸ್‌ ಗೆದ್ದಿದ್ದ ಆರ್‌ಸಿಬಿ ನಾಯಕ ರಾಹುಲ್‌ ದ್ರಾವಿಡ್‌ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಬ್ಯಾಟಿಂಗ್‌ ಶುರು ಮಾಡಿದ್ದ ರೈಡರ್ಸ್‌, ಚಾಲೆಂಜರ್ಸ್‌ ಬೌಲರ್‌ಗಳ ಮೇಲೆ ಅಕ್ಷರಶಃ ಪ್ರಹಾರ ಮಾಡಿದ್ದರು.

ನಾಯಕ ಸೌರವ್‌ ಗಂಗೂಲಿ (10 ರನ್‌) ಬೇಗನೆ ಔಟಾದರೂ, ಇನ್ನೊಂದು ತುದಿಯಲ್ಲಿ ಅಬ್ಬರಿಸಿದ್ದ ಬ್ರೆಂಡನ್‌ ಮೆಕ್ಲಂ, 73 ಎಸೆತಗಳಲ್ಲಿ 158 ರನ್‌ ಬಾರಿಸಿ ಅಜೇಯವಾಗಿ ಉಳಿದಿದ್ದರು. ಆ ಮೂಲಕ, ಐಪಿಎಲ್‌ನಲ್ಲಿ ಬ್ಯಾಟರ್‌ಗಳ ಅಬ್ಬರ ಹೇಗಿರಲಿದೆ ಎಂಬ ಝಲಕ್‌ ಅನ್ನು ಮೊದಲ ಪಂದ್ಯದಲ್ಲೇ ತೋರಿಸಿದ್ದರು. ಅವರ ಆಟದ ಬಲದಿಂದ ರೈಡರ್ಸ್‌ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 222 ರನ್‌ ಗಳಿಸಿತ್ತು.

ಈ ಮೊತ್ತ ಬೆನ್ನತ್ತಿದ ಬೆಂಗಳೂರು ಗಳಿಸಿದ್ದು ಕೇವಲ 82 ರನ್‌. ಬೃಹತ್‌ ಮೊತ್ತದ ಬಲ ಬೆನ್ನಿಗಿದ್ದಿದ್ದರಿಂದ ಕರಾರುವಕ್‌ ದಾಳಿ ಸಂಘಟಿಸಿದ ಕೆಕೆಆರ್‌ ಬೌಲರ್‌ಗಳು, ಆರ್‌ಸಿಬಿ ಬ್ಯಾಟರ್‌ಗಳನ್ನು ರಟ್ಟೆಯರಳಿಸಲು ಬಿಟ್ಟಿರಲಿಲ್ಲ. ಅಜಿತ್‌ ಅಗರ್ಕರ್‌ 3, ನಾಯಕ ಸೌರವ್‌ ಗಂಗೂಲಿ ಹಾಗೂ ಅಶೋಕ್‌ ದಿಂಡಾ ತಲಾ 2 ವಿಕೆಟ್‌ ಪಡೆದಿದ್ದರು. ಇನ್ನೆರಡು ವಿಕೆಟ್‌ಗಳನ್ನು ಇನ್ನೆರಡು ವಿಕೆಟ್‌ಗಳನ್ನು ಇಶಾಂತ್ ಶರ್ಮಾ ಮತ್ತು ಲಕ್ಷ್ಮೀರತನ್‌ ಶುಕ್ಲಾ ಹಂಚಿಕೊಂಡಿದ್ದರು.

ಕೆಕೆಆರ್‌ನ ಎದುರು ಕಂಗೆಟ್ಟಿದ್ದ ಆರ್‌ಸಿಬಿ, 15.1 ಓವರ್‌ಗಳಲ್ಲೇ ಸರ್ವಪತನ ಕಂಡು ಭಾರಿ ಸೋಲನ್ನು ಒಪ್ಪಿಕೊಂಡಿತ್ತು. 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಪ್ರವೀಣ್ ಕುಮಾರ್‌ ಹೊರತುಪಡಿಸಿ ಉಳಿದ ಯಾವೊಬ್ಬ ಬ್ಯಾಟರ್‌ ಎರಡಂಕಿಯನ್ನೇ ಮುಟ್ಟಿರಲಿಲ್ಲ. ಪ್ರವೀಣ್‌ 15 ಎಸೆತಗಳಲ್ಲಿ 18 ರನ್‌ ಗಳಿಸಿದ್ದರು.

ಈ ಪಂದ್ಯ ಮುಗಿದು ಇದೀಗ 17 ವರ್ಷಗಳು ಕಳೆದುಹೋಗಿವೆ. ಕೆಕೆಆರ್‌ ಮೂರು ಸಲ ಚಾಂಪಿಯನ್‌ ಪಟ್ಟಕ್ಕೇರಿದೆ. ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೊಂದು ಯಶಸ್ವಿ ಅಭಿಯಾನಕ್ಕೆ ಸಜ್ಜಾಗಿದೆ. ಅದಕ್ಕಾಗಿ ಮೊದಲ ಪಂದ್ಯದಿಂದಲೇ ಅತ್ಯುತ್ತಮ ಆಟವಾಡುವ ಛಲದಲ್ಲಿದೆ.

ಆದರೆ, ಮೂರು ಸಲ ಫೈನಲ್‌ ತಲುಪಿದರೂ ಒಮ್ಮೆಯೂ 'ಕಪ್‌' ಗೆಲ್ಲಲಾಗದ ನಿರಾಶೆಯಲ್ಲಿರುವ ಆರ್‌ಸಿಬಿ, ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಅದಕ್ಕಾಗಿ, ಹಾಲಿ ಚಾಂಪಿಯನ್ನರಿಗೆ ಮನೆಯಂಗಳದಲ್ಲೇ ಸೋಲುಣಿಸಿ ಮುನ್ನುಗ್ಗುವ ಲೆಕ್ಕಾಚಾರದಲ್ಲಿದೆ.

ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಟಾಸ್‌ ಗೆದ್ದಿರುವ ಆರ್‌ಸಿಬಿ ಬೌಲಿಂಗ್‌ ಆಯ್ದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.