ADVERTISEMENT

‘ಯೋಗ’ ಅರಿತರೆ 100 ವರ್ಷ

ಜಿ.ಎನ್.ಶಿವಕುಮಾರ
Published 19 ಜೂನ್ 2019, 16:47 IST
Last Updated 19 ಜೂನ್ 2019, 16:47 IST
   

ದೇಹವನ್ನು ಆರೋಗ್ಯವಾಗಿಡುವ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ಕಾಯಿಲೆ ಹತ್ತಿರ ಸುಳಿಯದಂತೆ ಚೈತನ್ಯ ತುಂಬುವ, ಮನಸು ಸದೃಢಗೊಳಿಸಬಲ್ಲ ಶಕ್ತಿ ಯೋಗಕ್ಕಿದೆ. ಯೋಗದ ಪರಿಣಾಮ ಖಚಿತ. ಆದರೆ ಸಾಧನೆ ಸತತವಾಗಿರಬೇಕು. ಮುಖ್ಯವಾಗಿ ತಾಳ್ಮೆ ಬೇಕು. ಅಂದಹಾಗೆ ಜೂನ್‌ 21 ವಿಶ್ವ ಯೋಗ ದಿನ.

ವಾಯುವಿಹಾರ, ವ್ಯಾಯಮ, ಓಟ, ಕ್ರೀಡೆಗಳು, ಜಿಮ್‌ನಲ್ಲಿ ದೈಹಿಕ ಕಸರತ್ತು, ಯೊಗಾಭ್ಯಾಸ, ಆಸ್ಪತ್ರೆಯತ್ತ ಓಟ. ಆರೋಗ್ಯ ರಕ್ಷಣೆಗೆ ‘ಸಾಮಾನ್ಯ’ ಮನುಷ್ಯರ ಪಾಲಿಗೆ ಇರುವ ಆಯ್ಕೆಗಳು ಇವು. ಸೋಂಬೇರಿತನವೇ ಮೈವೆತ್ತ ಮೂರ್ತಿಯಂತಿರುವ ಮನುಷ್ಯ ಇಂಥ ಸಂದರ್ಭದಲ್ಲಿ ಆಸ್ಪತ್ರೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾನೆ. ಹಣ ತೆತ್ತರೆ ಆಸ್ಪತ್ರೆಯಲ್ಲಿ ಏನೆಲ್ಲಾ ಚಿಕಿತ್ಸೆಗಳುಂಟು ಎಂಬ ‘ಸುಲಭ ಮಾರ್ಗ’ ಆಯ್ದುಕೊಳ್ಳುತ್ತಾನೆ.

ಇದರ ಬದಲಿಗೆ, ‘ಹಣವನ್ನೂ ಉಳಿಸಿ ಆರೋಗ್ಯವನ್ನು ಗಳಿಸಿ’, ‘ಯೋಗ ಮಾಡಿ ಆರೋಗ್ಯ ಪಡೆಯಿರಿ’ ಎಂಬ ಇನ್ನುಳಿದ ಆಯ್ಕೆಗಳಿಗೆ ಮನುಷ್ಯ ಸುಲಭವಾಗಿ ಒಗ್ಗಿಕೊಳ್ಳುತ್ತಿಲ್ಲ. ಒಂದಲ್ಲ ಒಂದು ಒತ್ತಡ, ಆತಂಕಗಳಲ್ಲಿ ‘ನಗರವೆಂಬ ಕಾಂಕ್ರಿಟ್ ಕಾಡಿ’ನಲ್ಲಿ ಬದುಕು ದೂಡುತ್ತಿರುವ ಜನರು, ತಮಗೆ ಯಾವಾಗಲೋ ಬಿಡುವಿದ್ದಾಗ ಹದಿನೈದು ದಿನಗಳಿಗೆ ಒಮ್ಮೆ ಅರ್ಧ ಗಂಟೆ, ‘ವೀಕೆಂಡ್’ಗಳಲ್ಲಿ ಒಂದಷ್ಟು ಕಸರತ್ತು, ಯೋಗಾಸನ, ಓಟ ಇತ್ಯಾದಿ ಮಾಡುತ್ತಾರೆ.

ಅಭ್ಯಾಸ ನಡೆಸಿದ್ದು ಕಡಿಮೆ ಸಮಯವಾದರೂ ಇದರಿಂದಲೇ ಎಲ್ಲವೂ ಸಾಧ್ಯವಾಗಬೇಕು ಎಂಬ ಬಹು ನಿರೀಕ್ಷೆ ಅವರದ್ದು. ಆರೋಗ್ಯದ ಗುಟ್ಟು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ನಿಗ್ರಹಿಸಿದ ‘ಮನಸ್ಸು’ ಹಾಗೂ ‘ಸರ್ವಾಂಗ ಸುಂದರ’ವಾದ ಕಾಯವನ್ನು ಹೊಂದುವುದೇ ಆರೋಗ್ಯ. ಆರೋಗ್ಯದ ಈ ಗುಟ್ಟನ್ನು ಹೇಳಿರುವುದೇ ಯೋಗ. ಕೆಲ ಆಸನಗಳನ್ನಷ್ಟೇ ಅಭ್ಯಾಸ ಮಾಡಿ, ನಾನೂ ಯೋಗ ಮಾಡ್ತೇನೆ ಎಂದು ಬೀಗುವವರು ಅದೆಷ್ಟೋ ಮಂದಿ ಇದ್ದಾರೆ. ಇಂಥವರು ಆಸನಗಳ ಅಭ್ಯಾಸ ಯೋಗದ ಎಂಟು ಅಂಗಗಳ ಪೈಕಿ ಮೂರನೆಯದ್ದು ಎಂಬುದನ್ನು ಮನಗಾಣಬೇಕು.

ಅಷ್ಟಾಂಗ ಯೋಗ

ADVERTISEMENT

ಅಷ್ಟಾಂಗ ಎಂದರೆ ಎಂಟು ವಿಭಾಗ ಅಥವಾ ಸಾಧನೆಯ ಮೆಟ್ಟಿಲುಗಳು ಎಂದರ್ಥ. ಅವೆಂದರೆ... ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ. ಸಮಾಧಿ ಸ್ಥಿತಿಯಲ್ಲಿ ಧ್ಯಾನಸ್ಥ ಮನಸ್ಸಿನ ಮೂಲಕ ಆತ್ಮ ಚೈತನ್ಯವು ದೇಹವನ್ನು ತೊರೆದು ಅನಂತಾತೀತದೆಡೆಗೆ ಸಾಗುವ ಸ್ಥಿತಿ ಮುಟ್ಟಲು ಸಾಧ್ಯವಿದೆ. ಈ ಸ್ಥಿತಿ ಮುಟ್ಟುವುದು ಯೋಗದ ಮುಖ್ಯ ಉದ್ದೇಶ.

ಹತ್ತಾರು ಬಗೆಯ ಯೋಗ

‘ಇಲ್ಲೇ ಡ್ರಾ; ಈಗಲೇ ಬಹುಮಾನ’ ಎನ್ನುವಂತೆ ಎಲ್ಲದಕ್ಕೂ ತಕ್ಷಣಕ್ಕೆ ಪ್ರತಿಫಲ ನಿರೀಕ್ಷೆ ಇಂದಿನ ಯುವಜನರಲ್ಲಿದೆ. ಇದರ ಬೆನ್ನುಬಿದ್ದಿರುವ ಯುವ ಜನರನ್ನು ಹಾಗೂ ವಿದೇಶಿಯರನ್ನು ಯೋಗದತ್ತ ಸೆಳೆಯುವ ನಿಟ್ಟಿನಲ್ಲಿ ಹಲವು ಬಗೆಯ ಯೋಗಾಸನ ವಿಧಾನಗಳು ಟಿಸಿಲೊಡೆಯುತ್ತಿವೆ. ಪರಂಪರಾಗತವಾಗಿ ಜ್ಞಾನ ಯೋಗ, ಭಕ್ತಿಯೋಗ, ಕರ್ಮಯೋಗ ಹಾಗೂ ರಾಜಯೋಗಗಳು ಆಚರಣೆಯಲ್ಲಿವೆ. ಜ್ಞಾನ, ಭಕ್ತಿ, ಕರ್ಮ ಈ ಹೆಸರುಗಳೇ ಅವುಗಳ ಅರ್ಥವನ್ನು ಸೂಚಿಸಿವೆ. ಪತಂಜಲಿ ಮುನಿ ಸೂಚಿಸಿರುವ ಅಷ್ಟಾಂಗ ಯೋಗದ ಆಚರಣೆಯೇ ರಾಜಯೋಗ.

ಇದರ ಜೊತೆಗೆ ‘ಡೈನಾಮಿಕ್’ ಯೋಗ, ‘ಪವರ್’ ಯೋಗ, ‘ಮ್ಯೂಸಿಕ್’ ಯೋಗ, ‘ಆರ್ಟಿಸ್ಟಿಕ್’ ಯೋಗ, ‘ಮೈಂಡ್ ಬ್ಲೋ’ ಯೋಗ, ‘ಪ್ರಾಣಿಕ್‘ ಯೋಗ, ‘ನೃತ್ಯ’ ಯೋಗ, ‘ಬ್ರೈನ್’ ಯೋಗ –ಹೀಗೆ, ಹಲವು ಬಗೆಯ ಯೋಗಗಳು ಚಾಲ್ತಿಯಲ್ಲಿವೆ. ಇವುಗಳ ಉದ್ದೇಶ ಆರೋಗ್ಯ ಕಾಳಜಿ. ಆದರೆ, ಯೋಗದ ಹೆಸರಿನಲ್ಲಿ ಬರೀ ಆಸನಗಳ ಅಭ್ಯಾಸವನ್ನು ವೇಗವಾಗಿ ಹಾಗೂ ಶ್ರಮದಿಂದ ಕೂಡಿರುವಂತೆ ಮಾಡಿಸುವ ದೈಹಿಕ ಕಸರತ್ತು ಹೊಸ ವಿಧಾನದಲ್ಲಿ ಎದ್ದು ಕಾಣುತ್ತದೆ.

‘ಪ್ರತಿ ಮನೆಗೂ ಯೋಗ ತಲುಪಬೇಕು. ಯೋಗಾಭ್ಯಾಸಕ್ಕೆ ಪ್ರತಿದಿನ ಒಂದು ಗಂಟೆ ಮೀಸಲಿಡಿ. ದಿನದ ಉಳಿದ 23 ಗಂಟೆಯನ್ನು ಸಮರ್ಥವಾಗಿ ನಿರ್ವಹಿಸುವ ಶಕ್ತಿ ಯೋಗಾಭ್ಯಾಸದಿಂದ ಲಭಿಸುತ್ತದೆ. ಪತಂಜಲಿ ಮುನಿ ಪ್ರಣೀತ ಅಷ್ಟಾಂಗ ಯೋಗದ ಪರಿಕಲ್ಪನೆಯ ಅಭ್ಯಾಸ ನಡೆಸುವುದು ಒಳಿತು’

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಇವನ್ನೂ ಓದಿ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.