ADVERTISEMENT

ಸರ್ವಾಂಗಾಸನದ ಹಂತಗಳು

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 16:39 IST
Last Updated 19 ಜೂನ್ 2019, 16:39 IST
   

ದೈಹಿಕ ಸದೃಢತೆ ನೀಡುವ ಹಾಗೂ ಆಸನಗಳ ತಾಯಿ ಎನಿಸಿರುವ ಸರ್ವಾಂಗಾಸನದಲ್ಲಿ ಏಳು ಹಂತಗಳಿದ್ದು, ಅವುಗಳಲ್ಲಿ ಮೊದಲ ನಾಲ್ಕು ಹಂತಗಳ ಪರಿಚಯವನ್ನು ಕಳೆದ ಸಂಚಿಕೆಯಲ್ಲಿ ತಿಳಿದಿದ್ದೇವೆ. ಉಳಿದ ಮೂರು ಹಂತಗಳ ಸಂಕ್ಷಿಪ್ತ ಪರಿಚಯ ಮತ್ತು ಅಭ್ಯಾಸ ಕ್ರಮವನ್ನು ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ.

5) ಸರ್ವಾಂಗಾಸನದಲ್ಲಿ ಪಾರ್ಶ್ವ ಊರ್ಧ್ವಪದ್ಮಾಸನ
ದೇಹ ಸರ್ವಾಂಗಾಸನ ಸ್ಥಿತಿಯಲ್ಲಿದ್ದು, ಅದೇ ಸ್ಥಿತಿಯಲ್ಲಿ ಕಾಲುಗಳನ್ನು ಪದ್ಮಾಸನ ಹಾಕಿ, ಸೊಂಟಕ್ಕೆ ಕೈಯನ್ನು ಆಧಾರವಾಗಿರಿಸಿ ಪಕ್ಕಕ್ಕೆ ಬಾಗಿಸಿ ಅಭ್ಯಾಸ ನಡೆಯುತ್ತದೆ. ಪದ್ಮಾಸನವು ಊರ್ಧ್ವಮುಖವಾಗಿದ್ದು, ಪಕ್ಕಕ್ಕೆ ತಿರುಗಿಸಿಟ್ಟು ಅಭ್ಯಾಸ ನಡೆಯುವುದರಿಂದ ಇದಕ್ಕೆ ಸರ್ವಾಂಗಾಸನದಲ್ಲಿ ಪಾರ್ಶ್ವ ಊರ್ಧ್ವಪದ್ಮಾಸನ ಎಂದು ಹೆಸರಿಸಲಾಗಿದೆ.

ಅಭ್ಯಾಸಕ್ರಮ: ಸರ್ವಾಂಗಾಸನ ಸ್ಥಿತಿಯಲ್ಲದ್ದು, ಮಂಡಿಗಳನ್ನು ಬಾಗಿಸಿ ಪಾದಗಳನ್ನು ಕೆಳಕ್ಕೆ ತಂದು ತೊಡೆಯ ಮೇಲಿರಿಸಿ(ಎಡ ಪಾದ ಬಲ ತೊಡೆಯ ಮೇಲೆ, ಬಲ ಪಾದ ಎಡ ತೊಡೆಯ ಮೇಲೆ) ಪದ್ಮಾಸನ ಹಾಕಿ. ಕೈಗಳನ್ನು ಸೊಂಟಕ್ಕೆ ಆಧಾರವಾಗಿಸಿ, ಸೊಂಟ, ಕಾಲುಗಳನ್ನು ಬಲಪಕ್ಕಕ್ಕೆ ತಿರುಗಿಸಿ. ಎಡ ಅಂಗೈ ಮೇಲೆ ಎಡ ಸೊಂಟದ ಕಾಕ್ಸಿಲ್ ಎಲುಬಿನ ಭಾಗವನ್ನು ಇರಿಸಿ ಸೊಂಟ ಮತ್ತು ಕಾಲುಗಳ ಭಾರವನ್ನು ಮಣಿಕಟ್ಟು, ಮೊಳಕೈ ಮೇಲೆ ಹಾಕುತ್ತಾ ಪದ್ಮಾಸನವನ್ನು ಪಕ್ಕಕ್ಕೆ ಬಾಗಿಸಿ. ಕೈ ಮೇಲೆ ದೇಹವನ್ನು ಸಮತೋಲನವಾಗಿಟ್ಟುಕೊಳ್ಳಬೇಕು.

ADVERTISEMENT

6) ಸರ್ವಾಂಗಾಸನದಲ್ಲಿ ಪಿಂಡಾಸನಈ ಆಸನ ಅಭ್ಯಾದಲ್ಲಿ ದೇಹದ ಭಂಗಿಯು ತಾಯಿ ಗರ್ಭದಲ್ಲಿನ ಭ್ರೂಣವನ್ನು
ಹೋಲುವುದರಿಂದ ಇದಕ್ಕೆ ಸರ್ವಾಂಗಾಸನದಲ್ಲಿ ಪಿಂಡಾಸನ ಎಂದು ಹೆಸರಿಸಲಾಗಿದೆ. ಇಲ್ಲಿ ದೇಹ ಸರ್ವಾಂಗಾಸನದಲ್ಲಿದ್ದು, ಕಾಲುಗಳು ಪದ್ಮಾಸನ ಹಾಕಲ್ಪಟ್ಟು ಸೊಂಟವನ್ನು ಬಾಗಿಸಿ ಪಸ್ಮಾಸನ ಎದೆಯತ್ತ ಸೆಳೆಯಲ್ಪಟ್ಟು, ಕೈಗಳಿಂದ ಬಂಧಿಸಿಟ್ಟು ಅಭ್ಯಾಸ ನಡೆಯುತ್ತದೆ.

ಅಭ್ಯಾಸಕ್ರಮ: ಸರ್ವಾಂಗಾಸನ ಸ್ಥಿತಿಯಲ್ಲಿದ್ದು, ಮೇಲ್ಭಾಗದಲ್ಲಿ ಪದ್ಮಾಸನ ಹಾಕಿ, ಉಸಿರನ್ನು ಹೊರಹಾಕುತ್ತಾ ಪದ್ಮಾಸನವನ್ನು ಮುಂದಕ್ಕೆ ಬಾಗಿಸಿ, ಪದ್ಮಾಸನದಲ್ಲಿ ತೊಡರಿದ್ದ ಕಾಲುಗಳನ್ನು ಹಣೆಗೆ ಒರಗಿಸಿಡಿ. ಬೆನ್ನಿಗೆ ಆಧಾರವಾಗಿಟ್ಟ ಕೈಗಳನ್ನು ಬಿಡಿಸಿ ಮುಂದೆ ತಂದು ಪದ್ಮಾಸನವನ್ನು ಸುತ್ತುವರಿದು ಬಂಧಿಸಿಡಿಯಬೇಕು.

ಸೂಚನೆ: ಉಸಿರಾಟ ಪ್ರಕ್ರಿಯೆಯು ತುಸು ವೇಗ, ಶ್ರಮದಿಂದ ಕೂಡಿರುತ್ತದೆ. ಸಾಧ್ಯವಾದಷ್ಟು ಸರಳ ಮತ್ತು ದೀರ್ಘ ಉಸಿರಾಟ ನಡೆಸುತ್ತಾ ಅಭ್ಯಾಸಿಸಿ.

7) ಸರ್ವಾಂಗಾಸನದಲ್ಲಿ ಪಾರ್ಶ್ವ ಪಿಂಡಾಸನ
ಸರ್ವಾಂಗಾಸನದಲ್ಲಿ ಪಿಂಡಾಸನದ ಮುಂದುವರಿದ ಹಂತ ಇದಾಗಿದ್ದು, ಪಕ್ಕಕ್ಕೆ ತಿರುಗಿಸಿಟ್ಟ ಭ್ರೂಣದ ಭಂಗಿಯನ್ನು ಹೋಲುತ್ತದೆ. ಸೊಂಟವನ್ನು ತಿರುಗಿಸಿಟ್ಟು, ಪದ್ಮಾಸನದಲ್ಲಿನ ಮಂಡಿಗಳನ್ನು ನೆಲಕ್ಕೆ ತಾಗಿಸಿಟ್ಟು ಅಭ್ಯಾಸ ನಡೆಯುವುದರಿಂದ ಇದಕ್ಕೆ ಸರ್ವಾಂಗಾಸನದಲ್ಲಿ ಪಾರ್ಶ್ವ ಪಿಂಡಾಸನ ಎಂದು ಹೆಸರಿಸಲಾಗಿದೆ.

ಅಭ್ಯಾಸಕ್ರಮ: ಸರ್ವಾಂಗಾಸನ ಸ್ಥಿತಿಯಲ್ಲಿದ್ದು, ಮೇಲ್ಭಾಗದಲ್ಲಿ ಪದ್ಮಾಸನ ಹಾಕಿ, ಮುಂದಕ್ಕೆ ಬಾಗಿಸಿ. ಸೊಂಟವನ್ನು ಬಲ ಪಕ್ಕಕ್ಕೆ ತಿರುಗಿಸಿಟ್ಟು ಪದ್ಮಾಸನವನ್ನು ಕೆಳಕ್ಕೆ(ನೆಲದತ್ತ) ಇಳಿಸಿ. ಮಂಡಿಗಳನ್ನು ನೆಲಕ್ಕೆ ತಾಗಿಸಿಡಿ(ಎಡ ಮಂಡಿಯು ಬಲ ಕಿವಿಗೆ ತಾಗಿದ್ದು, ಬಲ ಮಂಡಿಯು ಹೊರ ಭಾಗದಲ್ಲಿ ನೆಲಕ್ಕೂರಿರುತ್ತದೆ).

ಸೂಚನೆ: ದೇಹದ ಒಂದು ಭಾಗಕ್ಕೆ(ಕಾಲು, ಕೈ, ಪಕ್ಕ, ಹಿಂದೆ, ಮುಂದೆ) ಅಭ್ಯಾಸವಾದ ಬಳಿಕದ ಮತ್ತೊಂದು ಭಾಗಕ್ಕೂ ಸಮಾನ ಅಭ್ಯಾಸ ನಡೆಸುವುದನನ್ನು ಹಾಗೂ ಅಭ್ಯಾಸ ಆರಂಭಿಸಿದ ಕ್ರಮದಂತೆಯೇ ಅವರೋಹಣವನ್ನು ಮಾಡುವುದನ್ನು ಮತ್ತು ಅಂತಿಮ ಸ್ಥಿತಿಯಲ್ಲಿ 20ರಿಂದ 30 ಸೆಕೆಂಡು ನೆಲೆಸುವುದು, ಸರಳ ಉಸಿರಾಟ ನಡೆಸುವುದನ್ನು ಎಲ್ಲಾ ಹಂತಗಳ ಪಾಲಿಸಬೇಕು.

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.