ADVERTISEMENT

ಅಜಿತ್ ಪವಾರ್ ವಿಮಾನ ದುರಂತ ಪಿತೂರಿಯ ಭಾಗವಾಗಿರಬಹುದು: ರೋಹಿತ್ ಪವಾರ್ ಅನುಮಾನ

ಏಜೆನ್ಸೀಸ್
Published 11 ಫೆಬ್ರುವರಿ 2026, 2:52 IST
Last Updated 11 ಫೆಬ್ರುವರಿ 2026, 2:52 IST
<div class="paragraphs"><p>ಅಜಿತ್ ಪವಾರ್ ಮತ್ತು&nbsp;ರೋಹಿತ್ ಪವಾರ್</p></div>

ಅಜಿತ್ ಪವಾರ್ ಮತ್ತು ರೋಹಿತ್ ಪವಾರ್

   

–ಪಿಟಿಐ ಚಿತ್ರಗಳು 

ನವದೆಹಲಿ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಮತ್ತು ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ದುರಂತ ‘ಪಿತೂರಿ’ಯ ಭಾಗವಾಗಿರಬಹುದು ಎಂದು ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್‌ ಪವಾರ್ ಅನುಮಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಜನವರಿ 28ರಂದು ಮಹರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ವಿಮಾನ ದುರಂತದಲ್ಲಿ ಅಜಿತ್ ಪವಾರ್‌ ಮತ್ತು ಇತರ ನಾಲ್ವರು ಮೃತಪಟ್ಟಿದ್ದರು. ಘಟನೆಯ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ರೋಹಿತ್‌, ‘ಅಜಿತ್ ಪವಾರ್ ವಿಮಾನ ದುರಂತದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಪಘಾತದ ಕಾರಣಗಳ ಬಗ್ಗೆ ಕೂಲಂಕಷ ಪರಿಶೀಲನೆ ಅಗತ್ಯವಿದೆ’ ಎಂದಿದ್ದಾರೆ.

‘ಅಜಿತ್ ದಾದಾ ಅವರ ವಿಮಾನ ಅಪಘಾತವು ಪಿತೂರಿಯ ಭಾಗವಾಗಿರಬಹುದು. ಅಪಘಾತದ ಕೆಲವು ಅಂಶಗಳನ್ನು ನಾವು ತನಿಖೆ ಮಾಡಿದ್ದೇವೆ. ಯಾರಾದರೂ ಒಬ್ಬ ವ್ಯಕ್ತಿಯನ್ನು ಕೊಲ್ಲಲು ಬಯಸಿದರೆ, ಚಾಲಕನನ್ನು ಗುರಿಯಾಗಿಸಿಕೊಳ್ಳುವುದು ಸುಲಭವಾದ ಮಾರ್ಗ ಎಂದು ಒಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಅಪಘಾತದ ಹಿಂದಿನ ದಿನ ದಾದಾ ಮುಂಬೈನಿಂದ ಪುಣೆಗೆ ಕಾರಿನಲ್ಲಿ ಪ್ರಯಾಣಿಸಬೇಕಿತ್ತು. ಬೆಂಗಾವಲು ಪಡೆ ಕೂಡ ಸಿದ್ಧವಾಗಿತ್ತು. ಆದರೆ. ಅವರು ಕಾರಿನಲ್ಲಿ ಏಕೆ ಹೊರಡಲಿಲ್ಲ’ ಎಂದು ರೋಹಿತ್‌ ಪವಾರ್ ಪ್ರಶ್ನಿಸಿದ್ದಾರೆ.

ವಿಮಾನ, ಪೈಲಟ್ ಮತ್ತು ನಿರ್ವಹಣಾ ಕಂಪನಿಯ ಬಗ್ಗೆ ಗಂಭೀರ ಸಂದೇಹಗಳಿವೆ ಎಂದು ಅವರು ಆರೋಪಿಸಿದ್ದಾರೆ. ಅಪಘಾತವು ನಿಯಮಿತ ಕಾರ್ಯವಿಧಾನಗಳನ್ನು ಮೀರಿ ಪರಿಶೀಲನೆಗೆ ಅರ್ಹವಾಗಿದೆ ಎಂದೂ ಅವರು ಹೇಳಿದ್ದಾರೆ.

‘ಕ್ಯಾಪ್ಟನ್ ಸುಮಿತ್ ಕಪೂರ್ ಅವರನ್ನು ಮದ್ಯ ಸೇವನೆಯಿಂದಾಗಿ ಮೂರು ವರ್ಷಗಳ ಕಾಲ ಅಮಾನತುಗೊಳಿಸಲಾಗಿತ್ತು. ಇದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಪೈಲಟ್ ಪಾತ್ರದ ಬಗ್ಗೆ ಸಂಪೂರ್ಣ ಪರಿಶೀಲನೆ ಅಗತ್ಯವಿದೆ’ ಎಂದಿದ್ದಾರೆ.

ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಅಂತರರಾಷ್ಟ್ರೀಯ ವಿಮಾನ ಸಂಸ್ಥೆಗಳ ನೆರವು ಪಡೆದು ನ್ಯಾಯಯುತ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

‘2023ರಲ್ಲಿ ವಿಎಸ್ಆರ್ ಕಂಪನಿಯ ವಿಮಾನವೊಂದು ಅಪಘಾತಕ್ಕೀಡಾಗಿತ್ತು. ಅಂತಿಮ ತನಿಖಾ ವರದಿಯನ್ನು ಈಗಾಗಲೇ ಸಲ್ಲಿಸಲಾಗಿದೆ. ಈಗಲೂ ಸಹ, ಉನ್ನತ ರಾಜಕೀಯ ನಾಯಕರು ವಿಎಸ್ಆರ್ ಕಂಪನಿಯ ವಿಮಾನಗಳನ್ನೇ ಬಳಸುತ್ತಿದ್ದಾರೆ. ಕಂಪನಿಯ ಪರವಾನಗಿಯನ್ನು ಯಾಕೆ ರದ್ದುಪಡಿಸಿಲ್ಲ?, ಲಿಯರ್‌ಜೆಟ್ ವಿಮಾನವನ್ನು ಹೊಂದಿದ್ದ ವಿಎಸ್‌ಆರ್ ಕಂಪನಿಯು ವಾಯುಯಾನ ನಿಯಂತ್ರಕರ ಮೇಲೆ ಪ್ರಭಾವ ಬೀರಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಅಜಿತ್ ದಾದಾ ಅವರ ವಿಮಾನ ಅಪಘಾತ ನಿಜವಾಗಿಯೂ ಆಕಸ್ಮಿಕ ಅವಘಡವೇ ಅಥವಾ ಪಿತೂರಿಯೇ ಎಂದು ಇಡೀ ಮಹಾರಾಷ್ಟ್ರ ಪ್ರಶ್ನಿಸುತ್ತಿದೆ. ಕೆಲವರು ಇನ್ನೂ ದಾದಾ ಎಲ್ಲಿಂದಲೋ ಬರುತ್ತಾರೆ ಎಂದು ನಿರೀಕ್ಷಿಸುತ್ತಿದ್ದಾರೆ. ಕೆಲವರು ವಿಮಾನದಲ್ಲಿ 6 ಜನರು ಇದ್ದರು ಎಂದು ಹೇಳುತ್ತಾರೆ. ಅದು ಅಜಿತ್ ದಾದಾ ಅವರ ಮೃತದೇಹವಲ್ಲ, ಅದು ಇನ್ನೂ ದುಃಸ್ವಪ್ನದಂತೆ ಭಾಸವಾಗುತ್ತಿದೆ’ ಎಂದು ರೋಹಿತ್ ಹೇಳಿದ್ದಾರೆ.

‘ಘಟನೆ ನಡೆಯುವ ಮೊದಲು ವಿಮಾನದ ಟ್ರಾನ್ಸ್‌ಪಾಂಡರ್ ಅನ್ನು ಸ್ವಿಚ್ ಆಫ್ ಮಾಡಲಾಗಿದೆಯೇ?, ವಿಮಾನವನ್ನು ಅಪಘಾತಕ್ಕೀಡುಮಾಡುವ ಉದ್ದೇಶವಿತ್ತೇ ಅಥವಾ ಪೈಲಟ್ ನಿದ್ರೆಗೆ ಜಾರಿದ್ದರೇ?, ಕಳಪೆ ಗೋಚರತೆ ಇದ್ದರೂ, ವಿಮಾನ ಲ್ಯಾಂಡ್‌ ಮಾಡಲು ಅದೇ ರನ್‌ವೇ ಏಕೆ ಆಯ್ಕೆ ಮಾಡಲಾಯಿತು?, ಪೈಲಟ್ ರನ್‌ವೇ 11ಕ್ಕೆ ಬೇಡಿಕೆ ಇಟ್ಟಿದ್ದೇಕೆ? ಎಂದು ರೋಹಿತ್, ಹಲವು ತಾಂತ್ರಿಕ ಮತ್ತು ಕಾರ್ಯಾಚರಣೆಯ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಜಿತ್ ಪವಾರ್ ಅವರ ಸಾವಿಗೆ ರಾಜಕೀಯ ಪಿತೂರಿಯೇ ಕಾರಣವೆಂದು ಆರೋಪಿಸಿದ್ದರು. ಆದರೆ, ಶರದ್ ಪವಾರ್ ಅವರು ಪಿತೂರಿಯನ್ನು ತಳ್ಳಿಹಾಕಿದ್ದು, ಘಟನೆಯನ್ನು ಅಪಘಾತವಷ್ಟೇ ಎಂದು ಹೇಳಿದ್ದರು. ಎಲ್ಲ ವರದಿಗಳನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ರೋಹಿತ್ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.