ಅನುರಾಗ್ ಠಾಕೂರ್, ಶಶಿ ತರೂರ್, ಕನಿಮೋಳಿ, ಅಸಾದುದ್ದೀನ್ ಓವೈಸಿ, ಸುಪ್ರಿಯಾ ಸುಳೆ, ಮನೀಶ್ ತಿವಾರಿ
ನವದೆಹಲಿ: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವವೇದಿಕೆಯಲ್ಲಿ ಬಹಿರಂಗಪಡಿಸಲು ಸರ್ವ ಪಕ್ಷಗಳ ನಿಯೋಗವನ್ನು ವಿವಿಧ ದೇಶಗಳಿಗೆ ಕಳುಹಿಸಿಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಬೆನ್ನಲ್ಲೇ ಸರ್ವಪಕ್ಷಗಳ ನಿಯೋಗದ 59 ಸದಸ್ಯರ ಹೆಸರು ಅಂತಿಮಗೊಳಿಸಲಾಗಿದೆ.
ಸರ್ವಪಕ್ಷಗಳ ನಿಯೋಗದಲ್ಲಿ ಎಂಟು ರಾಜತಾಂತ್ರಿಕರು ಸೇರಿದಂತೆ 59 ಸದಸ್ಯರಲ್ಲಿ ಬಿಜೆಪಿಯಿಂದ 21, ಕಾಂಗ್ರೆಸ್‌ನಿಂದ 5, ತೆಲುಗು ದೇಶಂ ಪಕ್ಷದಿಂದ (ಟಿಡಿಪಿ) 3, ಎಎಪಿಯಿಂದ 2, ಶಿವಸೇನಾ 2 ಸೇರಿದಂತೆ ಡಿಎಂಕೆ, ಸಮಾಜವಾದಿ ಪಕ್ಷ, ಸಿಪಿಐ(ಎಂ) ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ತಲಾ ಒಬ್ಬರನ್ನು ಹೆಸರಿಸಲಾಗಿದೆ.
ನಿಯೋಗದ ಭಾಗವಾಗುವುದಕ್ಕಾಗಿ ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಸಂಸದರು, ಹಿರಿಯ ನಾಯಕರು ನಿಯೋಗದಲ್ಲಿ ಇದ್ದಾರೆ. ತಮ್ಮ ಪಕ್ಷಗಳ ಸದಸ್ಯರನ್ನು ನಿಯೋಗದಲ್ಲಿ ಕಳುಹಿಸಿಕೊಡಲು ರಾಜಕೀಯ ಪಕ್ಷಗಳು ಸಮ್ಮತಿಸಿವೆ ಎಂದು ಮೂಲಗಳು ತಿಳಿಸಿವೆ.
ತನ್ನ ನಾಯಕರ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತಾದರೂ, ಆ ಪಟ್ಟಿಯಲ್ಲಿ ತರೂರ್ ಅವರ ಹೆಸರು ಇರಲಿಲ್ಲ. ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತರೂರ್ ಅವರನ್ನು ಆಯ್ಕೆ ಮಾಡಿರುವುದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಟಾಪಟಿಗೆ ಕಾರಣವಾಗಿದೆ.
ಒಟ್ಟು ಏಳು ನಿಯೋಗಗಳನ್ನು ವಿವಿಧ ದೇಶಗಳಿಗೆ ಕಳುಹಿಸಲಾಗುತ್ತಿದೆ. ಈ ನಿಯೋಗಗಳ ನೇತೃತ್ವ ವಹಿಸುವ ಸಂಸದರನ್ನು ಆಯ್ಕೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ಅಮೆರಿಕ, ಪನಾಮ, ಗಯಾನಾ, ಬ್ರೆಜಿಲ್ ಮತ್ತು ಕೊಲಂಬಿಯಾಕ್ಕೆ ತೆರಳುವ ನಿಯೋಗದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಪಂಜಾಬ್‌ನ ಕಾಂಗ್ರೆಸ್ ಸಂಸದ ಅಮರ್ ಸಿಂಗ್ ಅವರು ಬಿಜೆಪಿಯ ರವಿಶಂಕರ್ ಪ್ರಸಾದ್ ನೇತೃತ್ವದಲ್ಲಿ ಬ್ರಿಟನ್, ಫ್ರಾನ್ಸ್, ಜರ್ಮನಿ, ಯುರೋಪಿಯನ್ ಯೂನಿಯನ್, ಇಟಲಿ ಮತ್ತು ಡೆನ್ಮಾರ್ಕ್‌ಗೆ ತೆರಳುವ ನಿಯೋಗದಲ್ಲಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಮಾಜಿ ವಿದೇಶಾಂಗ ಸಚಿವರಾಗಿದ್ದ ಸಲ್ಮಾನ್ ಖುರ್ಷಿದ್ ಅವರನ್ನು ಇಂಡೋನೇಷ್ಯಾ, ಮಲೇಷ್ಯಾ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಸಿಂಗಾಪುರಕ್ಕೆ ತೆರಳುವ ನಿಯೋಗದ ಭಾಗವಾಗಿ ಮಾಡಲಾಗಿದ್ದು, ಹಿರಿಯ ಸಂಸದ ಮನೀಶ್ ತಿವಾರಿ ಮತ್ತು ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ ಈಜಿಪ್ಟ್, ಕತಾರ್, ಇಥಿಯೋಪಿಯಾ, ದಕ್ಷಿಣ ಆಫ್ರಿಕಾಕ್ಕೆ ತೆರಳಲಿದ್ದಾರೆ.
ತಂಡಗಳಿಗೆ ಯಾರ ನೇತೃತ್ವ?
ಶಶಿ ತರೂರ್ (ಕಾಂಗ್ರೆಸ್) ಅಲ್ಲದೇ, ರವಿಶಂಕರ ಪ್ರಸಾದ್ (ಬಿಜೆಪಿ), ಸಂಜಯಕುಮಾರ್ ಝಾ (ಜೆಡಿಯು), ಬೈಜಯಂತ ಪಾಂಡ (ಬಿಜೆಪಿ), ಕನಿಮೊಳಿ (ಡಿಎಂಕೆ), ಸುಪ್ರಿಯಾ ಸುಳೆ (ಎನ್‌ಸಿಪಿ–ಶರದ್ ಪವಾರ್) ಹಾಗೂ ಶ್ರೀಕಾಂತ ಶಿಂದೆ (ಶಿವಸೇನಾ–ಶಿಂದೆ ಬಣ) ಅವರು ತಲಾ ಒಂದು ನಿಯೋಗದ ನೇತೃತ್ವ ವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.