ADVERTISEMENT

ಡ್ರಗ್ಸ್ ಮಾಫಿಯಾ‌ ವಿರುದ್ದ ಬುಲ್ಡೋಜರ್ ಕ್ರಮ: ಪರಮೇಶ್ವರ ಹೇಳಿಕೆಗೆ ಚಿದಂಬರಂ ಬೇಸರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಡಿಸೆಂಬರ್ 2025, 13:07 IST
Last Updated 13 ಡಿಸೆಂಬರ್ 2025, 13:07 IST
<div class="paragraphs"><p>ಪಿ.ಚಿದಂಬರಂ ಮತ್ತು ಜಿ.ಪರಮೇಶ್ವರ</p></div>

ಪಿ.ಚಿದಂಬರಂ ಮತ್ತು ಜಿ.ಪರಮೇಶ್ವರ

   

ಬೆಂಗಳೂರು: ‘ಡ್ರಗ್ಸ್ ಮಾಫಿಯಾ‌ದಲ್ಲಿ ತೊಡಗಿರುವ ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆಗೆ ನೀಡಿರುವ ಮನೆ ಮಾಲೀಕರ ಮೇಲೆ ನಿಗಾ ವಹಿಸಲಾಗಿದೆ. ಮನೆ ಬಾಡಿಗೆಗೆ ನೀಡಿದರೆ ಮನೆಗಳನ್ನು ಬುಲ್ಡೋಜರ್‌ನಿಂದ ನೆಲಸಮ ಮಾಡಲು ಹಿಂಜರಿಯುವುದಿಲ್ಲ’ ಎಂಬ ಗೃಹ ಸಚಿವ ಜಿ.ಪರಮೇಶ್ವರ ಹೇಳಿಕೆಗೆ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಬೇಸರ ವ್ಯಕ್ತಪಡಿಸಿದ್ದಾರೆ.

‘ಮಾದಕವಸ್ತು ಕಳ್ಳಸಾಗಣೆದಾರರ ಮನೆಗಳನ್ನು ಕೆಡವಲು ಬುಲ್ಡೋಜರ್‌ಗಳನ್ನು ಬಳಸುತ್ತೇವೆ ಎಂಬ ಕರ್ನಾಟಕದ ಗೃಹ ಸಚಿವರ ವರದಿಯ ಬಗ್ಗೆ ನನಗೆ ತುಂಬಾ ಬೇಸರವಾಗಿದೆ. ವರದಿ ತಪ್ಪಾಗಿದೆ ಎಂದು ನಾನು ಭಾವಿಸುತ್ತೇನೆ. ಕಾನೂನಿನ ಸರಿಯಾದ ಪ್ರಕ್ರಿಯೆಯಿಲ್ಲದೆ ಮನೆಗಳನ್ನು ಕೆಡವುವುದು ಕಾನೂನುಬಾಹಿರ ಮತ್ತು ಕುಟುಂಬದ ಇತರ ಸದಸ್ಯರ ಮೂಲಭೂತ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಕಾನೂನನ್ನು ಘೋಷಿಸಿದೆ’ ಎಂದು ಚಿದಂಬರಂ ‘ಎಕ್ಸ್‌’ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ADVERTISEMENT

‘ಉತ್ತರ ಪ್ರದೇಶದಲ್ಲಿ ಜಾರಿಯಲ್ಲಿರುವ ‘ಬುಲ್ಡೋಜರ್ ನ್ಯಾಯ’ ಎಂ‍ಬುದು ತಪ್ಪು, ಕಾನೂನುಬಾಹಿರ ಮತ್ತು ಅನ್ಯಾಯ ಎಂಬುದು ಕಾಂಗ್ರೆಸ್ ಪಕ್ಷದ ಅಭಿಪ್ರಾಯ. ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವು ಉತ್ತರಪ್ರದೇಶದ ಮಾದರಿಯನ್ನು ಅನುಸರಿಸುವುದು ಸೂಕ್ತವಲ್ಲ’ ಎಂದು ಚಿದಂಬರಂ ಹೇಳಿದ್ದಾರೆ.

ಪರಮೇಶ್ವರ ಹೇಳಿದ್ದೇನು?

ವಿಧಾನಪರಿಷತ್‌ನಲ್ಲಿ ಡ್ರಗ್ಸ್ ಮಾಫಿಯಾ‌ ಕುರಿತು ಕಾಂಗ್ರೆಸ್‌ನ ಅಬ್ದುಲ್‌ ಜಬ್ಬಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, ಮಾದಕ ದ್ರವ್ಯಜಾಲ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಚ್ಚಿನ ಲಾಭಕ್ಕಾಗಿ ಅಂತರರಾಜ್ಯ, ಅಂತರರಾಷ್ಟ್ರೀಯ ಜಾಲಗಳು ಕಾರ್ಯನಿರ್ವಹಿಸುತ್ತಿವೆ. ಅವರನ್ನು ಪತ್ತೆಹಚ್ಚುವ ಸಲುವಾಗಿ ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆಗೆ ನೀಡಿರುವ ಮನೆ ಮಾಲೀಕರ ಮೇಲೆ ನಿಗಾ ವಹಿಸಲಾಗಿದೆ. ಮನೆ ಬಾಡಿಗೆಗೆ ನೀಡಿದರೆ ಮನೆಗಳನ್ನು ಬುಲ್ಡೋಜರ್‌ನಿಂದ ನೆಲಸಮ ಮಾಡಲು ಹಿಂಜರಿಯುವುದಿಲ್ಲ. ವಿಶೇಷವಾಗಿ ಆಫ್ರಿಕಾ ಖಂಡದ ವಿದ್ಯಾರ್ಥಿಗಳು ತೊಡಗಿದ್ದಾರೆ. ಪ್ರಕರಣದಲ್ಲಿ ಬಂಧಿತರಾದ 300ಕ್ಕಿಂತ ಹೆಚ್ಚು ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ. ಸಮಸ್ಯೆ ಜಾಗತಿಕವಾಗಿದೆ. ರಾಜ್ಯದಲ್ಲಿ ಮಾದಕ ದ್ರವ್ಯಗಳ ಹಾವಳಿ ತಡೆಗಟ್ಟಲು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ನೇತೃತ್ವದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಸ್ಥಾಪಿಸಲಾಗಿದೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.