ADVERTISEMENT

ದೈಹಿಕ ಸದೃಢತೆ ನೀಡುವ ಸರ್ವಾಂಗಾಸನ ಹಂತಗಳು

ಜಿ.ಎನ್.ಶಿವಕುಮಾರ
Published 19 ಜೂನ್ 2019, 16:37 IST
Last Updated 19 ಜೂನ್ 2019, 16:37 IST
ವಲಿತಪಾದ ಸರ್ವಾಂಗಾಸನ
ವಲಿತಪಾದ ಸರ್ವಾಂಗಾಸನ   

‘ಆಸನಗಳ ತಾಯಿ’ ಎನಿಸಿರುವ ಸರ್ವಾಂಗಾಸನದ ಅಭ್ಯಾಸ ಕ್ರಮ ಹಾಗೂ ಅದರಿಂದಾಗುವ ಪ್ರಯೋಜನಗಳ ಕುರಿತು ಈಗಾಗಲೇ ತಿಳಿದಿದ್ದೇವೆ. ಅದರ ಮುಂದುವರೆದ ಹಂತಗಳನ್ನು ಇಲ್ಲಿ ವಿವರಿಸಲಾಗಿದೆ. ಎಲ್ಲಾ ಹಂತಗಳಲ್ಲಿ ಈ ಮೊದಲೇ ವಿವರಿಸಿದ ಎಲ್ಲಾ ಪ್ರಯೋಜನಗಳು ಲಭ್ಯವಾಗುವುದರ ಜತೆಗೆ, ಕೆಲವು ಅಂಗಗಳಿಗೆ ವಿಶೇಷವಾದ ಸಾಮರ್ಥ್ಯ ಲಭಿಸಲು ಸಹಕಾರಿಯಾಗಿವೆ.

ವಲಿತಪಾದ ಸರ್ವಾಂಗಾಸನ
ಸರ್ವಾಂಗಾಸನದ ಅಂತಿಮ ಸ್ಥಿತಿಯಲ್ಲಿದ್ದು, ಮೇಲ್ಭಾಗದಲ್ಲಿ ಕಾಲುಗಳನ್ನು ಹಿಂದಕ್ಕೂ–ಮುಂದಕ್ಕೂ ಮತ್ತು ಪಕ್ಕಕ್ಕೆ ವಿಸ್ತರಿಸುತ್ತಾ ಚಲನೆಗೊಳಪಡಿಸುವುದೇ ವಲಿತಪಾದ ಸರ್ವಾಂಗಾಸನ.

ಅಭ್ಯಾಸ ಕ್ರಮ: ಸರ್ವಾಂಗಾಸನದ ಅಂತಿಮ ಸ್ಥಿತಿಯಲ್ಲಿ ದೇಹವನ್ನು ನಿಲ್ಲಿಸಿ. ನಂತರ, ಎರಡೂ ಕಾಲುಗಳನ್ನು ವಿರುದ್ಧ ದಿಕ್ಕಿನಲ್ಲಿ ಎಂಟರಿಂದ ಹತ್ತು ಬಾರಿ ಹಿಂದೆ ಮುಂದೆ ಚಲಿಸಿ. ಬಳಿಕ, ಎರಡೂ ಕಾಲುಗಳನ್ನು ಪಕ್ಕಕ್ಕೆ ವಿಸ್ತರಿಸಿ. ವಿಸ್ತರಿಸಿದ ಕಾಲುಗಳನ್ನು ವಿರುದ್ಧ ದಿಕ್ಕಿನಲ್ಲಿ ಪರಿವೃತ್ತಾಕಾರವಾಗಿ ತಿರುಗಿಸಿ(ಇದು ಪರಿವೃತ್ತ ವಲಿತಪಾದ ಸರ್ವಾಂಗಾಸನ ಎನಿಸಿಕೊಳ್ಳುತ್ತದೆ). ಹೀಗೆ, ಆರೇಳು ಸುತ್ತು ಅಭ್ಯಾಸ ನಡೆಸಿ. ಅವರೋಹಣ ಕ್ರಮದಲ್ಲಿ ವಿಶ್ರಾಂತಿ ಸ್ಥಿತಿಗೆ ಬನ್ನಿ.

ADVERTISEMENT

ಫಲ: ಈ ಮೊದಲೇ ವಿವರಿಸಿದ ಎಲ್ಲಾ ಪ್ರಯೋಜನಗಳು ಲಭ್ಯವಾಗುವುದರ ಜತೆಗೆ, ಸೊಂಟ ನೋವು, ಬೆನ್ನು ನೋವು, ಕಿಬ್ಬೊಟ್ಟೆ ಸಮಸ್ಯೆ ನಿವಾರಣೆ, ಬೆನ್ನುಮೂಳೆಗಳಲ್ಲಿನ ಸ್ಥಾನಪಲ್ಲಟ ಸರಿಪಡಿಸಲು ಸಹಕಾರಿ.

ನಿರಾಲಂಬ ಸರ್ವಾಂಗಾಸನ

ನಿರಾಲಂಬ ಸರ್ವಾಂಗಾಸನ
ಬೆನ್ನಿಗೆ ಆಧಾರವಾಗಿ ಇರಿಸಿದ್ದ ಕೈಗಳನ್ನು ತೆಗೆದು ಭುಜ, ಕುತ್ತಿಗೆ, ಹಿಂದೆಲೆಯ ಮೇಲೆ ಇಡೀ ದೇಹವನ್ನು ನಿಲ್ಲಿಸಿ ಕೈಗಳನ್ನು ಮೇಲಕ್ಕೆ ನೇರವಾಗಿ ಚಾಚಿಡುವುದೇ ನಿರಾಲಂಬ ಸರ್ವಾಂಗಾಸನ.

ಅಭ್ಯಾಸ ಕ್ರಮ: ಸರ್ವಾಂಗಾಸನದ ಅಂತಿಮ ಸ್ಥಿತಿಯಲ್ಲಿ ದೇಹವನ್ನು ನಿಲ್ಲಿಸಿ, ಬೆನ್ನಿಗೆ ಆಧಾರವಾಗಿ ಇರಿಸಿದ್ದ ಕೈಗಳನ್ನು ಬಿಡಿಸಿ ನೀಳವಾಗಿ ಚಾಚಿ. ಅಲ್ಲಿಂದ ಕೈಗಳನ್ನು ತಲೆಯ ಮೇಲುಗಡೆ ತಂದು ನೀಳವಾಗಿಸಿ. ಭುಜದ ಮೇಲೆ ಇಡೀ ದೇಹ ನಿಲ್ಲುವಂತೆ ಸಮತೋಲನ ಕಾಯ್ದುಕೊಳ್ಳುತ್ತಾ ನಿಧಾನವಾಗಿ ಕೈಗಳನ್ನು ಮೇಲೆತ್ತಿ ತೊಡೆಗಳ ಪಕ್ಕಕ್ಕೆ ತಂದು ನಿಲ್ಲಿಸಿ. ಸಾಮಾನ್ಯ ಉಸಿರಾಟ ನಡೆಯುತ್ತಿರಲಿ. ಸಾಧನೆ ಹಾಗೂ ದೇಹ ಸಾಮರ್ಥ್ಯ ಆಧರಿಸಿ 1ರಿಂದ 5 ನಿಮಿಷ ಅಂತಿಮ ಸ್ಥಿತಿಯಲ್ಲಿ ನೆಲೆಸಬಹುದು.

ಫಲ: ಬಲವರ್ಧನೆಗೆ ಸಹಕಾರಿ. ದೇಹದಲ್ಲಿನ ಅನವಶ್ಯಕ ವಸ್ತುಗಳಿಂದ ಉತ್ಪತ್ತಿಯಾಗುವ ವಿಷಾಣುಗಳನ್ನು ನಾಶಪಡಿಸುತ್ತದೆ. ಹೆಚ್ಚಿನ ತಾಳ್ಮೆ ಹಾಗೂ ಸಮತೋಲನ ಗುಣಗಳ ವೃದ್ಧಿಗೆ ಸಹಕಾರಿ.

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.