ADVERTISEMENT

ವಿಶ್ವ ಯೋಗ ದಿನ | ಆರೋಗ್ಯಯುತ ವಿಶ್ವಕ್ಕೆ ಯೋಗ

ಯೋಗಾ ಯೋಗ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 16:49 IST
Last Updated 19 ಜೂನ್ 2019, 16:49 IST
   

ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ಜೀವಾತ್ಮ (ಮನಸ್ಸು) ಅನಂತಾತೀತವಾದ ದೈವತ್ವದ (ಚೈತನ್ಯ) ಜತೆ ಸಮ್ಮಿಳಿತಗೊಳ್ಳುವುದೇ ಯೋಗ ಆಗಿದೆ. ದೇಹ ಮತ್ತು ಮನಸ್ಸು, ಮನಸ್ಸು ಮತ್ತು ಚೈತನ್ಯಗಳನ್ನು ಕೂಡಿಸುವುದು ಆಥವಾ ಬಂಧಿಸುವುದು ಅಥವಾ ನೊಗಕ್ಕೆ ಕಟ್ಟುವುದೇ ಯೋಗದ ಉದ್ದೇಶ.

ಭಾರತೀಯ ಪರಂಪರೆಯ ಯೋಗ (Yoga) ಇಂದು ವಿಶ್ವವ್ಯಾಪಿಯಾಗಿದೆ. ಭಾರತ ಮತ್ತು ಇತರ ದೇಶಗಳ ಸಂಬಂಧವನ್ನು ಆರೋಗ್ಯಪೂರ್ಣವಾಗಿ ಕೂಡಿಸುವ ಮಹತ್ವದ ಕಾರ್ಯವಾಗಿ ರೂಪಗೊಂಡಿದೆ. ಯೋಗ ಯಾವೊಂದು ಜಾತಿ, ಧರ್ಮ, ಮತ-ಪಂಥಕ್ಕೆ ಸೀಮಿತವಾಗದೆ ಎಲ್ಲವನ್ನು ಮೀರಿ ವಿಶ್ವಕುಟುಂಬಿಯಾಗಿದೆ. ‘ಆರೋಗ್ಯಕ್ಕಾಗಿ ಯೋಗ', ‘ಯೋಗದಿಂದ ರೋಗ ದೂರ’, ‘ಯೋಗ ಮಾಡಿ ಆರೋಗ್ಯ ಪಡೆಯಿರಿ' ಎಂಬ ಅಂಶಗಳೊಂದಿಗೆ ‘ವಿಶ್ವ ಆರೋಗ್ಯಕ್ಕಾಗಿ ಯೋಗ' ಎಂಬ ಕನಸಿನ ಸಾಕಾರಕ್ಕೆ ಮುನ್ನುಗ್ಗುತ್ತಿದೆ.

ಆರೋಗ್ಯ ಎಂದರೇನು? ವಿಶ್ವ ಆರೋಗ್ಯ ಎಂದರೇನು? ಇವೆರಡನ್ನೂ ವಿಶ್ಲೇಷಿಸಿದಾಗ: ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವರ್ಗಗಳು(ಆರು) ಹೆಚ್ಚಾಗದೇ ಯೋಗ್ಯವಾದ ಸ್ಥಿತಿಯಲ್ಲಿ ಇರುವುದೇ ಆರೋಗ್ಯ. ಈ ಆರು ಅಂಶಗಳು ವಿಶ್ವಮಟ್ಟದಲ್ಲಿ, ಎಲ್ಲವೂ ತನ್ನದಾಗಬೇಕೆಂಬ ಕಾಮ(ಆಸೆ), ಭಯೋತ್ಪಾದನೆ/ಉಗ್ರವಾದ ಎಂಬ (ಕ್ರೋಧ), ನಾನೇ ಹೆಚ್ಚೆಂಬ(ಮದ, ಮತ್ಸರ), ಇವುಗಳ ಈಡೇರಿಕೆಗಾಗಿ ವಂಚನೆ(ಲೋಭ) ಹೆಚ್ಚಾಗಿ ವೈಷಮ್ಯಗಳು ವಿಜೃಂಬಿಸುತ್ತಿವೆ. ಸ್ಥಿತಿಗತಿಗಳಲ್ಲಿ ವ್ಯತ್ಯಾಸವಾಗಿವೆ.

ADVERTISEMENT

ಇವುಗಳನ್ನು ಸರಿಪಡಿಸಲು ವ್ಯಕ್ತಿಗತವಾಗಿ ‘ಆರು ಯೋಗ್ಯವಾದ' ರೀತಿಯಲ್ಲಿ ಆರೋಗ್ಯವಾಗಿರಬೇಕು. ಈ ಮೂಲಕ ಜಾಗತಿಕ ಮಟ್ಟದಲ್ಲಿ ‘ಆರೋಗ್ಯಯುತ ವಿಶ್ವ' ನಿರ್ಮಾಣ ಸಾದ್ಯವಿದೆ. ಇದಕ್ಕಿರುವ ಮಾರ್ಗೋಪಾಯಗಳಲ್ಲಿ ನೈತಿಕ ಶಿಕ್ಷಣ, ಮಾನವೀಯತೆ, ದಯೆ, ಸಕಲರ ಲೇಸು ಬಯಸುವುದು ಪ್ರಮುಖವಾದವುಗಳು. ಇವುಗಳ ಸಾಧನೆಗೆ ಮನುಷ್ಯನ ಮನಸ್ಸು ಸಮಾಧಾನ ಮತ್ತು ತಾಳ್ಮೆಯಿಂದ ಇದ್ದಾಗ ಮಾತ್ರ ಸಾದ್ಯ. ಅದಕ್ಕಾಗಿ ಅತ್ಯುತ್ತಮ ಮಾರ್ಗವನ್ನು ಯೋಗ ತೋರುತ್ತದೆ. ಯೋಗವು ದೈಹಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಬೌದ್ಧಿಕವಾಗಿ ಮನುಷ್ಯನನ್ನು ಗಟ್ಟಿಗೊಳಿಸುತ್ತದೆ. ಮೇಲಾಗಿ ಯೋಗ ‘ಜೀವನ ಜ್ಞಾನ ವಿಜ್ಞಾನ’ವಾಗಿದೆ.

* ಯೋಗ ಪಿತಾಮಹ: ಪತಂಜಲಿ ಮಹಾಮುನಿ

* ಯೋಗ ಗ್ರಂಥ: ಯೋಗ ಸೂತ್ರ

ಯೋಗ ಎಂದರೇನು?

ಚಿತ್ತವೃತ್ತಿಗಳ ನಿರೋಧ' -ಪತಂಜಲಿ ಮುನಿ, ಯೋಗಸೂತ್ರಗಳ ಪ್ರಥಮ ಅಧ್ಯಾಯದ ಎರಡನೇ ಸೂತ್ರ (ಅರ್ಥ: ಮನಸ್ಸಿನ ವಿವಿಧ ವೃತ್ತಿಗಳನ್ನು ಹತೋಟಿಯಲ್ಲಿಡುವುದು, ಚಿತ್ತ ಚಂಚಲತೆಯನ್ನು ದಮನಗೊಳೊಸುವುದು).

ಯೋಗ ಶ್ಲೋಕ

ಯೋಗೇನ ಚಿತ್ತಸ್ಯ, ಪದೇನಾ ವಾಚಾಂ

ಮಲಂ ಶರೀರಸ್ಯಚ ವೈದ್ಯಕೇನ

ಯೋಪಾಕರೋಕ್ತಮ್ ಪ್ರವರಂ ಮುನೀನಾಂ

ಪತಂಜಲೀಂ ಪ್ರಾಂಜಲಿನ್ ರಾನತೋಸ್ಮಿ

ಈ ಶ್ಲೋಕದಲ್ಲಿ ಹೇಳಿರುವುದು ಯೋಗದ ಮೂಲಕ ಚಿತ್ತವನ್ನು(ಮನಸ್ಸು) ನಿಯಂತ್ರಿಸುವ, ಶ್ಲೋಕ ಪಠಣ ಅಥವಾ ವಾಚನ ಮಾಡುವ ಪದ್ಧತಿಯನ್ನು ಹೇಳಿಕೊಡುವ ಮೂಲಕ 'ವಾಕ್ ದೋಷ' ಅಥವಾ 'ವ್ಯಾಕರಣ ದೋಷ'ವನ್ನು ತಿದ್ದಿದ, ದೇಹದ ಆಂತರಿಕ ಶುದ್ಧಿ ಕ್ರಿಯೆಗೆ ವೈದ್ಯಶಾಸ್ತ್ರವನ್ನು ತೋರಿದ ಅಥವಾ ರಚಿಸಿದ ಪತಂಜಲಿ ಮುನಿಗೆ ನಮನಗಳು ಎಂದು ಹೇಳಲಾಗಿದೆ.

ಯೋಗದ ಇತಿಹಾಸ

ಯೋಗಕ್ಕೆ 2,500 ವರ್ಷಗಳ ಪುರಾತನ ಇತಿಹಾಸವಿದೆ. ನಾಗರಿಕತೆ ಕಾಲದಿಂದಲೂ ಯೋಗ ರೂಢಿಯಲ್ಲಿ ಇತ್ತು ಎನ್ನುವುದಕ್ಕೆ ಹರಪ್ಪ ಮತ್ತು ಮಹೆಂಜೊದಾರೊದಲ್ಲಿ ನಡೆದ ಉತ್ಖನನದ ವೇಳೆ ಯೋಗಾಸನ ಭಂಗಿಯಲ್ಲಿರುವ ಶಿಲ್ಪಗಳು ಲಭ್ಯವಾಗಿವೆ.

ಯೋಗದ ಬಗೆಗಳು

* ಜ್ಞಾನ ಯೋಗ

* ಭಕ್ತಿ ಯೋಗ

* ಕರ್ಮ ಯೋಗ

* ರಾಜ ಯೋಗ

ಪತಂಜಲಿ ಹೇಳಿದ ಅಷ್ಠಾಂಗ ಯೋಗ

* ಯಯ

*ನಿಯಮ

* ಆಸನ

* ಪ್ರಾಣಾಯಾಮ

* ಪ್ರತ್ಯಾಹಾರ

* ಧಾರಣ

* ಧ್ಯಾನ

* ಸಮಾಧಿ

ಷಟ್ಕರ್ಮ ವಿಧಿ/ಕ್ರಿಯೆಗಳು

ದೇಹದ ಆಂತರಿಕ ಶುದ್ಧಿಗೆ ಆಚರಿಸುವ ಕ್ರಮಗಳೇ ಷಟ್ಕರ್ಮ(ಆರು) ಕ್ರಿಯಾ ವಿಧಿಗಳು

* ಧೌತಿ: ವಸ್ತ್ರ ಧೌತಿ, ದಂಡ ಧೌತಿ, ವಾಯುಸಾರ ಧೌತಿ

* ಬಸ್ತಿ

* ನೇತಿ: ಸೂತ್ರ ನೇತಿ, ಜಲ ನೇತಿ

* ತ್ರಾಟಕ: ಅಂತರ್ ಮತ್ತು ಬಾಹ್ಯ ತ್ರಾಟಕ

* ನೌಲಿ ಕ್ರಿಯೆ

* ಕಪಾಲಭಾತಿ

ಬಂಧಗಳು

* ಮೂಲಬಂಧ

* ಜಾಲಾಂದರ ಬಂದ

* ಉಡ್ಡಿಯಾನ ಬಂಧ

ಎಚ್ಚರಿಕೆಗಳು

* ತಪ್ಪಾಗಿ ಅಭ್ಯಾಸ ಮಾಡುವುದು, ಸ್ವಯಂ ಗುರುವಾಗಿ ಅಭ್ಯಾಸಕ್ಕೆ ತೊಡಗಬೇಡಿ.

* ಗುರು ಮುಖೇನ ಅಭ್ಯಾಸ ನಡೆಸಿ.

* ಬೆಳಿಗ್ಗೆ ಮತ್ತು ಸಂಜೆ ಅಭ್ಯಾಸ ಸಮಯ, ಆಹಾರ ಸೇವಿಸಿದ ಎಷ್ಟು ಸಮಯದ ನಂತರ ಅಭ್ಯಾಸಕ್ಕೆ ತೊಡಗಬೇಕು, ಅಭ್ಯಾಸ ಸ್ಥಳದ ಆಯ್ಕೆ ಸೂಕ್ತವಾಗಿರಬೇಕು.

* ಆಯಾಸ ಹಾಗೂ ದೇಹ ಹೆಚ್ಚು ಬಳಲಿದಾಗ ಅಭ್ಯಸ ಬೇಡ.

* ದೇಹದಲ್ಲಿ ಶಸ್ತ್ರಚಿಕಿತ್ಸೆ ಆಗಿದ್ದರೆ, ಹೃದಯ ಸಂಬಂಧಿ ಕಾಯಿಲೆಗಳಿದ್ದಾಗ ಸಲಹೆ ಪಡೆದು ಅಭ್ಯಾಸಿಸಿ.

ಸೇತುಬಂಧಾಸನ

ಯೋಗ/ಯೋಗಾಸನ ವ್ಯತ್ಯಾಸ

* ಯೋಗ ಎಂದರೆ ಸಮಗ್ರವಾದದ್ದು; ಕೂಡಿಸು, ಬಂಧಿಸು ಎಂಬ ಅರ್ಥಗಳಿರುವಂತೆ ಅಷ್ಟಾಂಗ ಯೋಗದ ಮೂಲಕ ಬದುಕಿನ ಪಾಠ ಹೇಳುತ್ತದೆ.

* ಬೆಳಗಿನ ಶೌಚ ಕರ್ಮಗಳಾದಿಯಾಗಿ ಸಮಾಜದಲ್ಲಿ ನಡೆದುಕೊಳ್ಳಬೇಕಾದ ರೀತಿ, ನೀತಿ, ಪ್ರಾರ್ಥನೆ, ಉಪಾಸನೆ, ದೇಹ ದಂಡನೆ, ಉಸಿರಾಡುವ ವಿಧಾನ, ಪ್ರಿಯವಾದುದರ ಮೇಲೆ ಧ್ಯಾನ ಒಳಗೊಂಡು ನೆಮ್ಮದಿಯ ನಿದ್ರೆಯಿಂದ ದೊರಕಬಹುದಾದ ವಿಶ್ರಾಂತಿಯನ್ನೊದಗಿಸುವ ಶವಾಸನದ ವರೆಗೆ ಎಲ್ಲವನ್ನೂ ವಿವರಿಸಿ, "ಜ್ಞಾನ ವಿಕಾಸ"ಕ್ಕೆ ದಾರಿ ತೋರುತ್ತದೆ.

* ಆಸನ ಅಥವಾ ಯೋಗಾಸನ ಎಂಬುದು ‘ಸಮಗ್ರ ಯೋಗ’ದ ಒಂದು ಭಾಗ. ಅಂದರೆ, ಅಷ್ಟಾಂಗ ಯೋಗದ ಮೂರನೇ ಅಂಗ. ಉಸಿರಾಟ ಪ್ರಕ್ರಿಯೆಯೊಂದಿಗೆ ದೇಹವನ್ನು ವಿವಿಧ ಭಂಗಿ/ನಿಲುವುಗಳಲ್ಲಿ ಇರಿಸುವುದೇ ಆಗಿದೆ.

* ಆಸನಗಳ ಅಭ್ಯಾಸದಿಂದ ದೇಹವು ದಂಡನೆಗೆ ಒಳಗಾಗುತ್ತದೆ. ದೇಹಾರೋಗ್ಯವನ್ನು ಗಳಿಸುವುದರ ಜತೆ ಜತೆಗೆ ಅಂಗಾಂಗಗಳು ಸುರೂಪ ಪಡೆಯುತ್ತವೆ.

ತಪ್ಪು ತಿಳಿವಳಿಕೆ ಬೇಡ

* ಯೋಗಾಭ್ಯಾಸ ಮಾಡುವಲ್ಲಿ ಯಾವುದೇ ಧರ್ಮ, ಜಾತಿ ಭೇದವಿಲ್ಲ.

* ಲಿಂಗ ಭೇದವಿಲ್ಲದೆ ಸ್ತ್ರೀಪುರುಷರಾದಿಯಾಗಿ ಎಲ್ಲರೂ ಅಭ್ಯಾಸ ಮಾಡಲು ಯಾವ ಅಭ್ಯಂತರವೂ ಇಲ್ಲ.

* 8 ವರ್ಷ ವಯಸ್ಸಿನ ಮೇಲ್ಪಟ್ಟ ಬಾಲಕ, ಬಾಲಕಿಯರು ಸೇರಿದಂತೆ ಎಲ್ಲ ವಯೋಮಾನದವರು ಅಭ್ಯಾಸ ಮಾಡಬಹುದು.

* ಯೋಗದ ಕುರಿತಾಗಿ ಇಲ್ಲ ಸಲ್ಲದ ಅಂತೆ ಕಂತೆಗಳನ್ನು ಹೆಣೆಯದೆ ಅದರಿಂದಾಗುವ ಪ್ರಯೋಜನ ಪಡೆಯಲು ಮುಂದಾಗಬೇಕಾದ ಅಗತ್ಯವಿದೆ.

ಧ್ಯಾನ ಎಂದರೇನು?

ಪತಂಜಲಿ ಮುನಿಯು ಅಷ್ಟಾಂಗ ಯೋಗದಲ್ಲಿ ಧ್ಯಾನ ಕುರಿತು ವಿವರಿಸಿದ್ದು, ಧ್ಯಾನ ಸಾಧನೆಯ ಏಳನೇ ಮೆಟ್ಟಿಲಾಗಿದೆ. ಆರನೇ ಮೆಟ್ಟಿಲು ಧಾರಣ. ಧಾರಣ ಎಂದರೆ ಒಂದೇ ವಿಷಯದ ಮೇಲಿನ ಏಕಾಗ್ರತೆ. ಮನಸ್ಸು ಚಂಚಲವಾಗದೆ ತಿಕ್ಕಾಟಕ್ಕೊಳಗಾಗದೆ ತನ್ನ ಕ್ರಿಯೆಯತ್ತಲೇ ಏಕಾಗ್ರವಾಗಿರುವ ಸ್ಥಿತಿ. ಈ ಧಾರಣವು ಆಂತರ್ಯದ ಜ್ಞಾನವು ಬುದ್ಧಿಯೊಡನೆ ಉದ್ವೇಗರಹಿತವಾಗಿ ಸಂಗಮಿಸುವಂತೆ ಪ್ರೇರಣೆ ನೀಡುತ್ತದೆ. ಇದೇ ಸ್ಥಿತಿ ಹೆಚ್ಚು ಸಮಯ ಮುಂದುವರಿದರೆ ಅದೇ ಧ್ಯಾನ (meditation). ಈ ಸ್ಥಿತಿಯನ್ನು ಯಾರೂ ವರ್ಣಿಸಲಾರರು. ಅದು ವಿವರಣಾತೀತ ಸ್ವಾದ. ಅನುಭವಿಸಿಯೇ ಆನಂದಿಸಬೇಕು.‌

* ತಮ್ಮ ಆಂತರ್ಯವನ್ನು ಕೂಲಂಕಷವಾಗಿ ಪರೀಕ್ಷಿಸಿಕೊಳ್ಳಲು ಇರುವ ಸಾಧನ ಧ್ಯಾನವಾಗಿದ್ದು, ಆತ್ಮವನ್ನು ಪೂರ್ಣವಾಗಿ ಅರಿತುಕೊಳ್ಳುವುದೇ ಧ್ಯಾನ.

* ಧ್ಯಾನಿಸುವವ - ಧ್ಯಾನ ಕ್ರಿಯೆ-ಧ್ಯೇಯ(ಗುರಿ) ಈ ಮೂರರ ಪರಸ್ಪರ ಸಂಯೋಜನೆಯೇ ಧ್ಯಾನ.

* ಧ್ಯಾನ ಎಂದರೆ ತಲ್ಲೀನತೆ.

ಪ್ರಾಣಾಯಾಮ ಎಂದರೇನು?

ಪ್ರಾಣ+ಆಯಾಮ = ಪ್ರಾಣಾಯಾಮ

ಪ್ರಾಣ= ಜೀವ, ಚೈತನ್ಯ. ಆಯಾಮ = ವೃದ್ಧಿಸು ಅಥವಾ ಹೆಚ್ಚಿಸು.

‘ಕ್ರಮಬದ್ಧ ಉಸಿರಾಟ ಪ್ರಕ್ರಿಯೆ ಮೂಲಕ ಚೈತನ್ಯಯುಕ್ತವಾದ ‘ಪ್ರಾಣವಾಯು’ವನ್ನು ಪಡೆದು ಮಾನವನ ಜೀವಿತಾವಧಿಯನ್ನು ಹೆಚ್ಚಿಸುವುದೇ’ ಪ್ರಾಣಾಯಾಮ.

ವಿಶ್ವ ಯೋಗ ದಿನ ಮುಖ್ಯಾಂಶಗಳು...

* ಜೂನ್ 21 ವಿಶ್ವ ಯೋಗ ದಿನ

* ಪ್ರಸ್ತುತ 5ನೇ ಯೋಗ ದಿನ

* 2019ರ ವಿಶ್ವಸಂಸ್ಥೆ ಘೋಷಣೆ: ‘ಉತ್ತಮ ವಾತಾವರಣಕ್ಕಾಗಿ ಕ್ರಮ’

* ವಿಶ್ವ ಯೋಗ ದಿನ ಆಚರಿಸುತ್ತಿರುವ ದೇಶಗಳು: 200

ಯೋಗ ದಿನದ ಪಠ್ಯಕ್ರಮ

* ಪ್ರಾರ್ಥನೆ/ಶ್ಲೋಕ ಪಠಣ

* ಲಘು ವ್ಯಾಯಾಮ/ದೇಹಕ್ಕೆ ಬಿಸಿಯುಟ್ಟಿಸುವ ಚಟುವಟಿಕೆಗಳು: ಕುತ್ತಿಗೆ, ಕೈಗಳು, ಎದೆ, ಸೊಂಟ, ಕಾಲುಗಳಿಗೆ ವ್ಯಾಯಾಮ

ಯೋಗಾಸನಗಳು...

ನಿಂತು ಅಭ್ಯಾಸಿಸುವ ಆಸನಗಳು

l ತಾಡಾಸನ

l ವೃಕ್ಷಾಸನ

l ಪಾದಹಸ್ತಾಸನ

l ಅರ್ಧ ಚಕ್ರಾಸನ

l ತ್ರಿಕೋನಾಸನ

ಕುಳಿತು ಅಭ್ಯಾಸಿಸುವ ಆಸನಗಳು

l ಭದ್ರಾಸನ

l ವಜ್ರಾಸನ

l ಅರ್ಧ ಉಷ್ಟ್ರಾಸನ

l ಉಷ್ಟ್ರಾಸನ

l ಶಶಾಂಕಾಸನ

l ಉತ್ಥಾನ ಮಂಡೂಕಾಸನ

l ವಕ್ರಾಸನ

ಹೊಟ್ಟೆಯ ಮೇಲೆ ಮಲಗಿ(ಕೆಳಮುಖ) ಅಭ್ಯಾಸಿಸುವ ಆಸನ

l ಮಕರಾಸನ

l ಭುಜಂಗಾಸನ l ಶಲಭಾಸನ

ಪವನಮುಕ್ತಾಸನ

ಬೆನ್ನ ಮೇಲೆ ಮಲಗಿ ಅಭ್ಯಾಸಿಸುವ ಆಸನಗಳು

l ಸೇತುಬಂಧಾಸನ

l ಉತ್ತಾನಪಾದಾಸನ

l ಪವನಮುಕ್ತಾಸನ

l ಶವಾಸನ

l ಕಪಾಲಬಾತಿ: ಕಮ್ಮಾರನ ತಿದೆಯಂತೆ ಉಸಿರಾಟ ವೇಗವಾಗಿ ನಡೆಸುವ ಪ್ರಕ್ರಿಯೆ.

ಪ್ರಾಣಾಯಾಮ

l ಅನುಲೋಮ ವಿಲೋಮ ಪ್ರಾಣಾಯಾಮ

l ನಾಡಿಶೋಧನ ಪ್ರಾಣಾಯಾಮ

l ಶೀತಳಿ ಪ್ರಾಣಾಯಾಮ

l ಭ್ರಮರಿ ಪ್ರಾಣಾಯಾಮ

l ಧ್ಯಾನ

l ಸಂಕಲ್ಪ

l ಶಾಂತಿ ಪಥ

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.