ADVERTISEMENT

IPL 2025 | ರಹಾನೆ 25 ಎಸೆತಗಳಲ್ಲಿ ಫಿಫ್ಟಿ; ಆರ್‌ಸಿಬಿಗೆ 175 ರನ್ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮಾರ್ಚ್ 2025, 13:57 IST
Last Updated 22 ಮಾರ್ಚ್ 2025, 13:57 IST
<div class="paragraphs"><p>ಅಜಿಂಕ್ಯ ರಹಾನೆ</p></div>

ಅಜಿಂಕ್ಯ ರಹಾನೆ

   

(ಪಿಟಿಐ ಚಿತ್ರ)

ಕೋಲ್ಕತ್ತ: ನಾಯಕ ಅಜಿಂಕ್ಯ ರಹಾನೆ ಗಳಿಸಿದ ಬಿರುಸಿನ ಅರ್ಧಶತಕದ (56) ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಇಂದು (ಶನಿವಾರ) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯುತ್ತಿರುವ ಐಪಿಎಲ್ 18ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 174 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ.

ADVERTISEMENT

ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಮೊದಲು ಪೀಲ್ಡಿಂಗ್ ಆಯ್ದುಕೊಂಡರು. ಮೊದಲ ಓವರ್‌ನಲ್ಲೇ ಕ್ವಿಂಟನ್ ಡಿಕಾಕ್ (4) ವಿಕೆಟ್ ಕಬಳಿಸಿದ ಜೋಶ್ ಹ್ಯಾಜಲ್‌ವುಡ್ ಮೊದಲ ಆಘಾತ ನೀಡಿದರು.

ಈ ವೇಳೆ ಜೊತೆಗೂಡಿದ ಸುನಿಲ್ ನಾರಾಯಣ್ ಹಾಗೂ ನಾಯಕ ಅಜಿಂಕ್ಯ ರಹಾನೆ ಬಿರುಸಿನ ಆಟದ ಮೂಲಕ ಗಮನ ಸೆಳೆದರು. ಆರ್‌ಸಿಬಿ ಬೌಲರ್‌ಗಳನ್ನು ದಂಡಿಸಿದ ರಹಾನೆ ಕೇವಲ 25 ಎಸೆತಗಳಲ್ಲಿ ಅರ್ಧಶತಕದ ಸಾಧನೆ ಮಾಡಿದರು.

ಅಲ್ಲದೆ ಕೆಕೆಆರ್ ನಾಯಕರಾದ ಮೊದಲ ಪಂದ್ಯದಲ್ಲೇ ಫಿಫ್ಟಿ ಬಾರಿಸಿದರು. ಹಾಗೆಯೇ ನಾರಾಯಣ್ ಜೊತೆ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟದಲ್ಲಿ ಭಾಗಿಯಾದರು. ರಹಾನೆ 31 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿ ಅಬ್ಬರಿಸಿದರು.

ಅತ್ತ ನಾರಾಯಣ್ 26 ಎಸೆತಗಳಲ್ಲಿ 44 ರನ್ (5 ಬೌಂಡರಿ, 3 ಸಿಕ್ಸರ್) ಗಳಿಸಿದರು. ಈ ನಡುವೆ ನಿಖರ ದಾಳಿ ಸಂಘಟಿಸಿದ ಕೃಣಾಲ್ ಪಾಂಡ್ಯ, ಕೆಕೆಆರ್ ಓಟಕ್ಕೆ ಕಡಿವಾಣ ಹಾಕಿದರು. ರಹಾನೆ ಜೊತೆಗೆ ವೆಂಕಟೇಶ್ ಅಯ್ಯರ್ (6) ಹಾಗೂ ರಿಂಕು ಸಿಂಗ್ (12) ಅವರನ್ನು ಹೊರದಬ್ಬಿದರು.

ಕೆಳ ಕ್ರಮಾಂಕದಲ್ಲಿ ಅಂಗ್‌ಕ್ರಿಶ್ ರಘುವಂಶಿ 30 ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರೂ ಇನಿಂಗ್ಸ್‌ನ ಕೊನೆಯ ಹಂತದಲ್ಲಿ ಆರ್‌ಸಿಬಿ ಬೌಲರ್‌ಗಳು ಸಾಂಘಿಕ ದಾಳಿ ಸಂಘಟಿಸುವ ಮೂಲಕ ಕಡಿವಾಣ ಹಾಕಿದರು. ಆ್ಯಂಡ್ರೆ ರಸೆಲ್ (4) ಅವರನ್ನು ಸುಯೇಶ್ ಶರ್ಮಾ ಕ್ಲೀನ್ ಬೌಲ್ಡ್ ಮಾಡಿದರು.

ಇನ್ನುಳಿದಂತೆ ರಮಣದೀಪ್ ಸಿಂಗ್ 6*, ಹರ್ಷೀತ್ ರಾಣಾ 5 ಹಾಗೂ ಸ್ಪೆನ್ಸರ್ ಜಾನ್ಸನ್ 1* ರನ್ ಗಳಿಸಿದರು. ಆರ್‌ಸಿಬಿ ಪರ ಕೃಣಾಲ್ ಮೂರು ಮತ್ತು ಹ್ಯಾಜಲ್‌ವುಡ್ ಎರಡು ವಿಕೆಟ್ ಗಳಿಸಿ ಮಿಂಚಿದರು.

ಐಪಿಎಲ್ ಹಬ್ಬಕ್ಕೆ ಚಾಲನೆ...

2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ವರ್ಣರಂಜಿತ ಚಾಲನೆ ದೊರಕಿತು. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುತ್ತಿದೆ.

ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟೀದಾರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

ಹೊಸ ನಾಯಕ, ಅದೇ ಕನಸು...

ನೂತನ ನಾಯಕ ರಜತ್ ಪಾಟೀದಾರ್ ಮುಂದಾಳತ್ವದಲ್ಲಿ ಮತ್ತೊಮ್ಮೆ ಮೊದಲ ಪ್ರಶಸ್ತಿಯ ನಿರೀಕ್ಷೆಯೊಡನೆ ಆರ್‌ಸಿಬಿ ತನ್ನ ಅಭಿಯಾನ ಆರಂಭಿಸಿದೆ. ಈಗ ಮೂರು ಬಾರಿಯ ಚಾಂಪಿಯನ್ ಕೋಲ್ಕತ್ತ ವಿರುದ್ಧ ಮೇಲುಗೈ ಸಾಧಿಸುವ ಛಲದಲ್ಲಿದೆ.

ಕೋಲ್ಕತ್ತ ತಂಡದ ನಾಯಕತ್ವವೂ ಬದಲಾವಣೆಯಾಗಿದ್ದು, ಶ್ರೇಯಸ್‌ ಅಯ್ಯರ್ ಸ್ಥಾನದಲ್ಲಿ ಅಜಿಂಕ್ಯ ರಹಾನೆ ಸಾರಥ್ಯ ವಹಿಸಿದ್ದಾರೆ. ಕಳೆದ ಬಾರಿ ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ ಚಾಂಪಿಯನ್ ಆಗಿತ್ತು.

ಆಡುವ ಬಳಗ ಇಂತಿವೆ:

ರಾಯಲ್ ಚಾಲೆಂಜರ್ಸ್ ಬೆಂಗಳೂರು:

ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ ರಸೀಕ್ ದಾರ್ ಸಲಾಂ, ಸುಯೇಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್.

ಕೋಲ್ಕತ್ತ ನೈಟ್ ರೈಡರ್ಸ್:

ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಅಂಗ್‌ಕ್ರಿಶ್ ರಘುವಂಶಿ, ಆ್ಯಂಡ್ರೆ ರಸೆಲ್, ರಮಣ್‌ದೀಪ್ ಸಿಂಗ್, ಸ್ಪೆನ್ಪರ್ ಜಾನ್ಸನ್, ಹರ್ಷೀತ್ ರಾಣಾ, ವರುಣ್ ಚಕ್ರವರ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.