ADVERTISEMENT

ಐಎಂಎ ವಂಚನೆ ಪ್ರಕರಣ: ₹ 4.35 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಒಟ್ಟು 6 ಕಡೆಗಳಲ್ಲಿ ಎಸ್‌ಐಟಿ ಶೋಧ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 20:21 IST
Last Updated 26 ಆಗಸ್ಟ್ 2019, 20:21 IST
   

ಬೆಂಗಳೂರು:ಷೇರುದಾರರಿಗೆ ಕೋಟ್ಯಂತರ ಹಣ ವಂಚಿಸಿದ ಐಎಂಎ ಸಮೂಹ ಕಂಪನಿಯ ಮಾಲೀಕ ಮೊಹಮ್ಮದ್‌ ಮನ್ಸೂರ್ ಖಾನ್‍ಗೆ ಸೇರಿದ ಒಟ್ಟು ₹ 2.15 ಕೋಟಿ ಮೌಲ್ಯದ ಚರಾಸ್ತಿ ಮತ್ತು 2.20 ಕೋಟಿ ನಗದನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಜಯನಗರ, ಯಶವಂತಪುರ, ಶಿವಾಜಿನಗರ ಹಾಗೂ ತಿಲಕ್‍ ನಗರದಲ್ಲಿರುವ ಐಎಂಎ ಗೋಲ್ಡ್, ಬನ್ನೇರುಘಟ್ಟ ರಸ್ತೆಯಲ್ಲಿರುವ ಐಎಂಎ ಪಬ್ಲಿಷರ್ಸ್ ಕಂಪನಿಯ ಮೇಲೆ ಶೋಧ ನಡೆಸಿದ್ದ ಎಸ್ಐಟಿ ಅಧಿಕಾರಿಗಳು ಪೀಠೋಪಕರಣಗಳು ಸೇರಿ ₹ 2.15 ಕೋಟಿ ಮೌಲ್ಯದ ಚರಾಸ್ತಿ ಜಪ್ತಿ ಮಾಡಿದ್ದಾರೆ.

ಸಕ್ಷಮ ಪ್ರಾಧಿಕಾರದ ಪ್ರಾದೇಶಿಕ ಆಯುಕ್ತರು ನಿಯೋಜಿಸಿರುವ ಅಧಿಕಾರಿಗಳ ಜೊತೆ ಸೇರಿಕೊಂಡು ಎಸ್‍ಐಟಿ ತಂಡವು ಐಎಂಎ ಸಂಸ್ಥೆಗೆ ಸಂಬಂಧಿಸಿದ ಆರು ಕಡೆಗಳಲ್ಲಿ ಶೋಧ ನಡೆಸಿದೆ. ಸಿಕ್ಕಿದ ಚರಾಸ್ತಿಗಳನ್ನು ಪಟ್ಟಿ ಮಾಡಿ ಮಹಜರು ಮೂಲಕ ದಾಸ್ತಾನು ಮಾಡಲಾಗಿದೆ.

ADVERTISEMENT

ಅವುಗಳ ಹರಾಜು ಪ್ರಕ್ರಿಯೆ ನಡೆಸಲು ಸಕ್ಷಮ ಪ್ರಾಧಿಕಾರದ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‍ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಮನ್ಸೂರ್ ಐಎಂಎ ಸಂಸ್ಥೆಯ ಮೂಲಕ ಅಬ್ದುಲ್ ಸಾಬೀರ್ ಜತೆ ಸೇರಿ ಸ್ಕೈವಾಕ್ ನಿರ್ಮಾಣ ವ್ಯವಹಾರ ನಡೆಸುತ್ತಿದ್ದ.

ಮನ್ಸೂರ್‌ನಿಂದ ಅಬ್ದುಲ್ ಸಾಬೀರ್ ₹ 2 ಕೋಟಿ ಪಡೆದಿರುವುದು ತನಿಖೆಯ ಸಂದರ್ಭದಲ್ಲಿ ಪತ್ತೆಯಾಗಿದೆ. ತಕ್ಷಣ ಅಬ್ದುಲ್ ಸಾಬೀರ್‌ನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ವ್ಯವಹಾರದ ಬಗ್ಗೆ ಒಪ್ಪಿಕೊಂಡಿದ್ದ ಅವನು ₹ 2 ಕೋಟಿಯನ್ನು ಡಿಡಿ ಮೂಲಕ ಹಿಂದಿರುಗಿಸಿದ್ದ.

ಈ ಹಣವನ್ನು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‍ನ ರಿಜಿಸ್ಟ್ರಾರ್ ಖಾತೆಗೆ ಜಮೆ ಮಾಡಲು ಎಸ್‍ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಅಲ್ಲದೆ, ಬಿಎಂಡಬ್ಲ್ಯೂ ಕಾರು ಖರೀದಿಸಲು ನವನೀತ್ ಮೋಟಾರ್ಸ್‌ ಕಂಪನಿಗೆ ಮನ್ಸೂರ್ ಮುಂಗಡವಾಗಿ ₹ 10 ಲಕ್ಷ ನೀಡಿರುವುದು ಎಸ್‍ಐಟಿ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಹಣವನ್ನೂ ಡಿಡಿ ಮೂಲಕ ನವನೀತ್ ಮೋಟಾರ್ಸ್ ಕಂಪನಿಯಿಂದ ಪಡೆದುಕೊಳ್ಳಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

‌ಮನ್ಸೂರ್ ಹೃದಯಕ್ಕೆ ‘ಸ್ಟೆಂಟ್’
ಮೊಹಮ್ಮದ್‌ ಮನ್ಸೂರ್ ಖಾನ್‍ಗೆ ಜಯದೇವ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ, ಸ್ಟೆಂಟ್ ಅಳವಡಿಸಿ ಮತ್ತೆ ಜೈಲಿಗೆ ರವಾನಿಸಲಾಗಿದೆ.

ಹೃದಯ ಸಂಬಂಧಿ ಸಮಸ್ಯೆಯಿಂದ ಮನ್ಸೂರ್ ಬಳಲುತ್ತಿದ್ದಾನೆ. ವಿಶೇಷ ತನಿಖಾ ದಳ (ಎಸ್‍ಐಟಿ) ಅಧಿಕಾರಿಗಳು ಆತನನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆದ ಅವಧಿ ಮುಗಿಯುತ್ತಿದ್ದಂತೆ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಮಧ್ಯೆ, ಇದೇ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು, ಸಂಬಂಧಿಸಿದ ಕಡತಗಳನ್ನು ಎಸ್‍ಐಟಿ ಅಧಿಕಾರಿಗಳಿಂದ ಪಡೆದುಕೊಂಡಿದ್ದಾರೆ.

ಹೃದಯ ಸಂಬಂಧಿ ಸಮಸ್ಯೆ ಉಲ್ಬಣಿಸಿದ್ದರಿಂದ ವೈದ್ಯರ ಸಲಹೆಯಂತೆ ಜಯದೇವ ಆಸ್ಪತ್ರೆಯಲ್ಲಿ ಸ್ಟೆಂಟ್ ಅಳವಡಿಸಲಾಗಿತ್ತು. ಎರಡು ದಿನ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆದ ಮನ್ಸೂರ್‌ನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮತ್ತೆ ಜೈಲಿಗೆ ಕಳುಹಿಸಲಾಗಿದೆ. ಮನ್ಸೂರ್‍ಗೆ ಆರೈಕೆ ಮಾಡುವುದರ ಜೊತೆಗೆ ಆತನ ಚಟುವಟಿಕೆ ಮೇಲೆ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

ಮನ್ಸೂರ್ ಚೇತರಿಸಿಕೊಂಡ ಬಳಿಕ ಆತನನ್ನು ವಿಚಾರಣೆ ನಡೆಸಲು ಸಿಬಿಐ ಅಧಿಕಾರಿಗಳು ಮುಂದಾಗಿದ್ದಾರೆ. ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳು ತಮ್ಮಿಂದ ಲಂಚ ಪಡೆದಿರುವ ಬಗ್ಗೆ ವಿಚಾರಣೆ ವೇಳೆ ಮನ್ಸೂರ್‌ ಬಾಯಿ ಬಿಟ್ಟಿದ್ದಾನೆ. ಹೀಗಾಗಿ ಅವರೆಲ್ಲರಿಗೂ ಇದೀಗ ಭೀತಿ ಉಂಟಾಗಿದೆ.

ಐಎಂಎ ಹಗರಣದ ಬಗ್ಗೆ ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.